Breaking News

ಪ್ರೀತಿಯ ಅಣ್ಣ… ನಿಮ್ಮ ಅಕ್ಕ-ತಂಗಿಯರು ಕಷ್ಟದಲ್ಲಿದ್ದಾರೆ ಸಮಸ್ಯೆ ಬಗೆಹರಿಸಿ – ಸಿಎಂ ಟ್ವೀಟ್‌ ಶೈಲಿಯಲ್ಲೇ ʻಆಶಾʼಗಳ ಮನವಿ

Spread the love

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಹಿಂಪಡೆಯುವಂತೆ ಸರ್ಕಾರ ನಡೆಸುತ್ತಿರುವ ಮನವೊಲಿಕೆ ಪ್ರಯತ್ನಗಳು ಫಲ ನೀಡುತ್ತಿಲ್ಲ. ಈ ಮಧ್ಯೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆಶಾ ಕಾರ್ಯಕರ್ತೆಯರೊಂದಿಗೆ ನಡೆಸಿದ ಸಭೆಯೂ ವಿಫಲವಾಗಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರ ಮನವೊಲಿಸುವ ಉದ್ದೇಶದಿಂದ ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಸರ್ಕಾರಿ ನಿವಾಸದಲ್ಲಿ ಆರೋಗ್ಯ ಇಲಾಖೆ ಆಯುಕ್ತ ಗುರುದತ್ ಹೆಗ್ಡೆ ನೇತೃತ್ವದಲ್ಲಿ ಸಭೆ ನಡೆಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸಚಿವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಡುವಂತೆ ಮನವಿ ಮಾಡಿದರು.

ಮುಂಬರುವ ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸ್ವಲ್ಪ ಸಮಯಾವಕಾಶ ನೀಡಬೇಕು. ನಿಮ್ಮ ಬೇಡಿಕೆಗಳನ್ನ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು. ಆದರೆ, ಇದಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು, ಸರ್ಕಾರದಿಂದ ಅಧಿಕೃತ ಘೋಷಣೆ ಹೊರಡಿಸಬೇಕು. ಪತ್ರದ ಮೂಲಕ ಸ್ಪಷ್ಟ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.

10 ಸಾವಿರ ರೂ. ವಿಚಾರದಲ್ಲಿ ಮಾತುಕತೆಗೆ ಸಿದ್ಧ
ಸರ್ಕಾರಕ್ಕೆ ತೊಂದರೆ ನೀಡುವ ಉದ್ದೇಶ ನಮಗಿಲ್ಲ. ಇನ್ನೂ 12 ದಿನಗಳ ಕಾಲ ಪ್ರತಿಭಟನಾ ಸ್ಥಳದಲ್ಲೇ ಕಾಲ ಕಳೆಯಲು ಸಿದ್ಧರಿದ್ದೇವೆ. ನಮ್ಮ ಕುಟುಂಬದ ಸದಸ್ಯರೂ ಹೋರಾಟಕ್ಕೆ ಕೈಜೋಡಿಸಲಿದ್ದಾರೆ. ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು. ಪ್ರತಿಭಟನಾ ಸ್ಥಳದಲ್ಲಿ ಇದುವರೆಗೆ ಯಾವುದೇ ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಿಲ್ಲ. 10 ಸಾವಿರ ರೂ. ವಿಚಾರದಲ್ಲಿ ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ಸರ್ಕಾರ ಎಷ್ಟು ಮೊತ್ತ ನೀಡಲಿದೆ ಎಂಬುದನ್ನು ಅಧಿಕೃತವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

ಇದೇ ವೇಳೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಟ್ವೀಟ್ ವಿಚಾರವಾಗಿಯೂ ಆಶಾ ಕಾರ್ಯಕರ್ತೆಯರು ಪ್ರತಿಕ್ರಿಯಿಸಿದರು. ‘ನಮ್ಮನ್ನು ಸಹೋದರಿಯರು ಎಂದು ಕರೆದಿದ್ದಕ್ಕೆ ನಮ್ಮ ಪ್ರೀತಿಯ ಅಣ್ಣನಿಗೆ ಧನ್ಯವಾದಗಳು. ಆದರೆ, ನಿಮ್ಮ ಅಕ್ಕತಂಗಿಯರು ಕಷ್ಟದಲ್ಲಿದ್ದಾರೆ. ಹತ್ತಾರು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ದಯವಿಟ್ಟು ನಮ್ಮ ಸಮಸ್ಯೆಗಳನ್ನು ಬಗೆಹರಿಸಿ’ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಭೆಯ ಬಳಿಕ ಮಾತನಾಡಿದ ಎಐಯುಟಿಯುಸಿ ಕಾರ್ಯದರ್ಶಿ ನಾಗಲಕ್ಷ್ಮಿ, ಸಚಿವರೊಂದಿಗೆ ಸಭೆ ನಡೆದರೂ ಸರ್ಕಾರದಿಂದ ಯಾವುದೇ ಸ್ಪಷ್ಟ ಪ್ರಸ್ತಾವನೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎರಡು ದಿನಗಳ ಹಿಂದೆಯೂ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆದಿತ್ತು. ಅಧಿವೇಶನದಲ್ಲಿ ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದರು. ಇಂದಿನ ಸಭೆಯಲ್ಲೂ ಆರೋಗ್ಯ ಸಚಿವರು ಸರ್ಕಾರದ ಮೇಲೆ ವಿಶ್ವಾಸವಿಡುವಂತೆ ಮನವಿ ಮಾಡಿದರು. ಆದರೆ, ಪ್ರತಿಭಟನೆ ಹಿಂಪಡೆಯುವಂತೆ ಕೇಳಿಕೊಂಡರೇ ಹೊರತು, ಬೇಡಿಕೆ ಈಡೇರಿಸುವ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರೂ ಹಣ ನೀಡಲಿಲ್ಲ. ಬಿಜೆಪಿ ಸರ್ಕಾರವೂ 1,000 ರೂ. ನೀಡುವುದಾಗಿ ಘೋಷಿಸಿ ಈಡೇರಿಸಲಿಲ್ಲ. ಹೀಗಾಗಿ ಕೇವಲ ಮಾತಿನ ಭರವಸೆಗಳನ್ನ ನಂಬಲು ಸಾಧ್ಯವಿಲ್ಲ ಎಂದು ನಾಗಲಕ್ಷ್ಮಿ ಹೇಳಿದರು.

ಬಿಸಿಯೂಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರೂ ಇದೇ ರೀತಿಯ ಬೇಡಿಕೆಗಳನ್ನ ಮುಂದಿಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಸೌಲಭ್ಯ ನೀಡಬಾರದು ಎಂದು ನಾವು ಹೇಳುತ್ತಿಲ್ಲ. ಆದರೆ, ಆಶಾ ಕಾರ್ಯಕರ್ತೆಯರಿಗೆ ಆಗಿರುವ ಅನ್ಯಾಯದ ಬಗ್ಗೆ ಸರ್ಕಾರ ಗಮನಹರಿಸಬೇಕು. ಇಂದಿನ ಸಭೆಯಲ್ಲಿ ಹಲವು ವಿಚಾರಗಳ ಕುರಿತು ವಿವರವಾಗಿ ಚರ್ಚೆ ನಡೆದಿದ್ದರೂ ನಮಗೆ ತೃಪ್ತಿಯಾಗುವಂತಹ ಭರವಸೆ ಸಿಕ್ಕಿಲ್ಲ. ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಸಚಿವರು ತಿಳಿಸಿದ್ದಾರೆ. ಆದರೆ, ಸ್ಪಷ್ಟ ನಿರ್ಧಾರ ಪ್ರಕಟಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ನಾಗಲಕ್ಷ್ಮಿ ಎಚ್ಚರಿಸಿದರು.


Spread the love

About Laxminews 24x7

Check Also

KPSC ನೇಮಕಾತಿ ಹಗರಣ; ಶಿವಶಂಕರಪ್ಪ ಸಾಹುಕಾರ್‌, ಗೀತಾ ಜೈಲಿಗೆ

Spread the love ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್‌, ಗೀತಾ ಜೈಲುಪಾಲಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ