Breaking News

‌ಫಾರಿನ್‌ ಸೀರೆ, ವಜ್ರಾಭರಣದ ಗಿಫ್ಟ್ ಆಸೆ ಮಹಿಳೆಗೆ 1.75 ಕೋಟಿ ನಾಮ

Spread the love

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ  ಪರಿಚಯವಾದ ವ್ಯಕ್ತಿಯೊಬ್ಬನ ಮಾತು ನಂಬಿ ಯಶವಂತಪುರದ ಮಹಿಳೆಯೊಬ್ಬರು ದುಬಾರಿ ಸೀರೆ ಹಾಗೂ ವಜ್ರಾಭರಣದ ಗಿಫ್ಟ್ ಆಸೆಗೆ ಬಿದ್ದು ಬರೋಬ್ಬರಿ 1.75 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ  ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸಾಹಿಲ್ ಜುಗ್ಗಲ್ ಎಂಬಾತ ಫೇಸ್‌ಬುಕ್ ಮೂಲಕ ಮಹಿಳೆಗೆ ಪರಿಚಯವಾಗಿದ್ದಾನೆ. ಬಳಿಕ ಇಬ್ಬರೂ ಮೊಬೈಲ್ ನಂಬರ್‌ ಪಡೆದು ಸಂಪರ್ಕ ಬೆಳೆಸಿದ್ದಾರೆ, ಇಬ್ಬರ ನಡುವೆ ಆತ್ಮೀಯತೆಯೂ ಬೆಳೆದಿದೆ. ಈ ವೇಳೆ ತಾನು ಯುನೈಟೆಡ್ ಕಿಂಗ್‌ಡಮ್ (UK)ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಸಾಹಿಲ್, ಮಹಿಳೆಗೆ ವಿದೇಶದಿಂದ ದುಬಾರಿ ಸೀರೆ, ರತ್ನ ಹಾಗೂ ವಜ್ರಾಭರಣಗಳನ್ನ ಗಿಫ್ಟ್ ಆಗಿ ಕಳುಹಿಸುತ್ತಿರುವುದಾಗಿ ನಂಬಿಸಿದ್ದ.

ಕೆಲ ದಿನಗಳ ನಂತರ ಮಹಿಳೆಗೆ ಕರೆ ಮಾಡಿದ ಸಾಹಿಲ್, ʻನನ್ನ ಬಳಿ ಭಾರತೀಯ ಕರೆನ್ಸಿ ಇಲ್ಲ. ಕಸ್ಟಮ್ಸ್ ಶುಲ್ಕ ಪಾವತಿಸಲು ತಾತ್ಕಾಲಿಕವಾಗಿ 40 ಲಕ್ಷ ರೂ. ನೀಡಿ. ನಾನು ಭಾರತಕ್ಕೆ ಬಂದ ಬಳಿಕ ಹಣವನ್ನ ಹಿಂದಿರುಗಿಸುತ್ತೇನೆ ಎಂದು ಮನವೊಲಿಸಿದ್ದಾನೆ. ಹಣ ಯಾರಿಗೆ ನೀಡಬೇಕು ಎಂದು ಮಹಿಳೆ ಕೇಳಿದಾಗ, ಅರ್ಧಕ್ಕೆ ಹರಿದಿದ್ದ 10 ನೋಟಿನ ಫೋಟೋವನ್ನ ಕಳುಹಿಸಿ, ಅದೇ ರೀತಿಯ ನೋಟು ತೋರಿಸುವ ವ್ಯಕ್ತಿಗೆ ಹಣ ನೀಡುವಂತೆ ಸೂಚಿಸಿದ್ದ ಎನ್ನಲಾಗಿದೆ. ಸಾಹಿಲ್ ಹೇಳಿದಂತೆ ಹೋಟೆಲ್‌ಗೆ ತೆರಳಿದ ಮಹಿಳೆ, ಹರಿದ ನೋಟು ತೋರಿಸಿದ ವ್ಯಕ್ತಿಗೆ 40 ಲಕ್ಷ ರೂ. ಕೊಟ್ಟಿದ್ದಾಳೆ.

ಇದಾದ ಬಳಿಕ ತಾನು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ, ಗಿಫ್ಟ್‌ನಲ್ಲಿರುವ ವಜ್ರಾಭರಣಗಳ ಮೌಲ್ಯ ಹೆಚ್ಚಿರುವುದರಿಂದ ವಿವಿಧ ಶುಲ್ಕಗಳನ್ನ ಪಾವತಿಸಬೇಕಾಗುತ್ತದೆ ಎಂದು ಹೇಳಿ ಮತ್ತೆ ಮತ್ತೆ ಹಣ ಕೇಳಿದ್ದಾನೆ. ಹೀಗೆ ಮಹಿಳೆಯನ್ನ ನಂಬಿಸಿ ತೆರಿಗೆ, ಇತರ ಕಾರಣಗಳನ್ನ ನೀಡಿ ಹಂತ ಹಂತವಾಗಿ ಒಟ್ಟು ಒಂದು ಮುಕ್ಕಾಲು ಕೋಟಿ ರೂ. ಪಡೆದು ವಂಚನೆ ಎಸಗಿದ್ದಾರೆ ಎಂದುಆಕೆ ಆರೋಪಿಸಿದ್ದಾರೆ.

ಬಹಳ ದಿನಗಳಾದರೂ ಗಿಫ್ಟ್ ತಲುಪದ ಹಿನ್ನೆಲೆಯಲ್ಲಿ ಮಹಿಳೆಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ತಾನು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಬಳಿಕ ಅವರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ದಸರಾ ಉದ್ಘಾಟನೆ ರೇಸ್‌ನಲ್ಲಿ ಕ್ರಿಕೆಟ್ ಸಾಧಕರ ಹೆಸರು – ಸಿಎಂ ನಿರ್ಧಾರವೇ ಅಂತಿಮ: ಯತೀಂದ್ರ

Spread the loveಮೈಸೂರು: ಈ ಬಾರಿಯ ದಸರಾ ಉದ್ಘಾಟಕರ ಹೆಸರನ್ನು ಸಿಎಂ ಡಿಕೆ ಶಿವಕುಮಾರ್ ಅವರೇ ಆಯ್ಕೆ ಮಾಡಲಿದ್ದು, ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ