ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿಲ್ಲದೆ ಜನರು ಪರದಾಟ ನಡೆಸಿದ್ದಾರೆ. ಹೀಗಾಗಿ ಕೂಡಲೇ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಹೊನೂರು ಗ್ರಾಮ ಪಂಚಾಯತಿ ಕಚೇರಿ ಮುಂದೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ.
ಮಾಕಾಪೂರ ಗ್ರಾಮದಲ್ಲಿ ಕುಡಿಯುವ ನೀರನ ಸಮಸ್ಯೆ ಹೆಚ್ಚಾದ ಹಿನ್ನೆಲೆ ಟ್ರ‍್ಯಾಕ್ಟರ್‌ನಲ್ಲೇ ಬಿಂದಿಗೆ ತಂದು ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಮೋಟಾರ್ ಕೆಟ್ಟು 15 ದಿನ ಕಳೆದರೂ ಗ್ರಾಮ ಪಂಚಾಯತಿ ಸಿಬ್ಬಂದಿ ರಿಪೇರಿ ಮಾಡದ ಹಿನ್ನೆಲೆ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬರಗಾಲದ ಮಧ್ಯೆ ಜಾನುವಾರುಗಳಿಗೂ ನೀರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಹೂನೂರು ಗ್ರಾಮ ಪಂಚಾಯತ್ ಕಚೇರಿ ಮುಂದೆ ಮಹಿಳೆಯರು ಸಹ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಇತ್ತ ಬೀದರ್‌ನಲ್ಲಿಯೂ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಾ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಖಾಲಿ ಕೊಡ ಹಿಡಿದು ಪಂಚಾಯಿತಿ ಮುಂದೆ ಮಹಿಳೆಯರ ಪ್ರತಿಭಟನೆ ಮಾಡಿದ್ದು, ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಗ್ರಾಪಂ ಅಧಿಕಾರಿಗಳನ್ನು ಮಹಿಳೆಯರು ತರಾಟೆ ತೆಗೆದುಕೊಂಡಿದ್ದು, ನೀರಿನ ಸಮಸ್ಯೆ ಬಗ್ಗೆ ತಾಪಂ, ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಹೊಸ ಕೊಳವೆಬಾವಿ ಕೊರೆಯಿಸಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದು, ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ತಾಪಂ ಇಒ ಹನುಮಂತರಾಯ ಭೇಟಿ ನೀಡಿ. ಅಹವಾಲು ಸ್ವೀಕರಿಸಿದರು. ಶೀಘ್ರವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಮಹಿಳೆಯರು ಪ್ರತಿಭಟನೆ ಹಿಂಪಡೆದಿದ್ದಾರೆ.
Laxmi News 24×7