Breaking News

ವಾಟ್ಸಪ್‌ಗೆ ಬಂತು ಮದುವೆ ಆಹ್ವಾನ – ಲಿಂಕ್‌ ಓಪನ್‌ ಮಾಡಿದ ಕೂಡಲೇ 9 ಲಕ್ಷ ಮಾಯ

Spread the love

ಬೆಂಗಳೂರು: ವಾಟ್ಸಪ್‌ಗೆ  ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ ಎಂದು ತೆರೆಯಲು ಹೋಗುವ ಮುನ್ನ ಎಚ್ಚರವಾಗಿರಿ. ಮದುವೆ ಆಹ್ವಾನ ಪತ್ರಿಕೆ ಬಂದಿದೆ ಎಂದು ನಂಬಿ ಫೈಲ್ ಓಪನ್ (APK File Scam) ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸುಮಾರು 9.96 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಸೈಬರ್ ವಂಚಕರು ಜನರನ್ನು ಮೋಸಗೊಳಿಸಲು ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ವಾಟ್ಸಪ್‌ಗೆ ಬರುವ ಅಪರಿಚಿತ ಲಿಂಕ್‌ ಅಥವಾ ಫೈಲ್‌ಗಳನ್ನು ಕ್ಲಿಕ್‌ ಮಾಡಿ ಹಣ ಕಳೆದುಕೊಂಡ ಘಟನೆಗಳು ಆಗಾಗ ಕೇಳಿಬರುತ್ತಲೇ ಇವೆ. ಇದೀಗ ಅದೇ ರೀತಿಯಲ್ಲಿ ವಾಟ್ಸಪ್‌ನಲ್ಲಿ ಮದುವೆ ಆಹ್ವಾನದ ಹೆಸರಿನಲ್ಲಿ APK ಫೈಲ್ ಕಳುಹಿಸಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಸುಮಾರು 9.96 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್‌ನಲ್ಲಿ ಮದುವೆ ಆಹ್ವಾನದ ಸಂದೇಶ ಬಂದಿದೆ. ಸ್ನೇಹಿತ ಅಥವಾ ಪರಿಚಿತರದ್ದಿರಬಹುದು ಎಂದು ಭಾವಿಸಿ ಅವರು ಆ ಫೈಲ್ ಅನ್ನು ಮಾಡಿದ್ದಾರೆ.

ಫೈಲ್ ಓಪನ್ ಮಾಡಿದ ಬಳಿಕ ಅದು APK ಫೈಲ್ ಎಂಬುದು ಗೊತ್ತಾಗಿದೆ. ಆಗ ಅದನ್ನು ಹೆಚ್ಚಿನ ಗಮನ ಕೊಡದೆ ಬಿಟ್ಟಿದ್ದಾರೆ. ಆದರೆ 15 ನಿಮಿಷಗಳಲ್ಲಿ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಸಂದೇಶಗಳು ಬರಲು ಆರಂಭಿಸಿವೆ

ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಸುಮಾರು 9 ಲಕ್ಷ 96 ಸಾವಿರ ಹಣ ವಿವಿಧ ಹಂತಗಳಲ್ಲಿ ವಂಚಕರ ಖಾತೆಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಇದರಿಂದ ಬೆಚ್ಚಿಬಿದ್ದ ರಮೇಶ್ ಬಾಬು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಬರುವ APK ಫೈಲ್‌ಗಳು, ಲಿಂಕ್‌ಗಳು ಅಥವಾ ಮದುವೆ ಆಹ್ವಾನದಂತಹ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಬಾರದು ಎಂದು ಸೈಬರ್ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಏನಿದು ಎಪಿಕೆ ಫೈಲ್‌?
ಎಪಿಕೆ ಎಂದರೆ ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು (Apps) ಇನ್‌ಸ್ಟಾಲ್ ಮಾಡಲು ಬಳಸುವ ಒಂದು ಫೈಲ್ ಫಾರ್ಮ್ಯಾಟ್ ಆಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗದ ಆ್ಯಪ್‌ಗಳನ್ನು ಇಂಟರ್ನೆಟ್‌ನಿಂದ ನೇರವಾಗಿ ಡೌನ್‌ಲೋಡ್ ಮಾಡಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಲು ಈ ಫೈಲ್‌ಗಳನ್ನು ಬಳಸಲಾಗುತ್ತದೆ.

ಇವು ಕಂಪ್ಯೂಟರ್‌ನಲ್ಲಿರುವ .exe ಫೈಲ್‌ಗಳಿದ್ದಂತೆ. ಎಪಿಕೆ ಫೈಲ್‌ಗಳು ಆಂಡ್ರಾಯ್ಡ್‌ಗೆ ಅತ್ಯಂತ ಉಪಯುಕ್ತವಾಗಿದ್ದರೂ, ಸೈಬರ್ ವಂಚಕರು ಇವುಗಳ ಮೂಲಕ ಮೊಬೈಲ್ ಹ್ಯಾಕ್ ಮಾಡಿ ಹಣ ದೋಚುವ ಸಾಧ್ಯತೆ ಇರುತ್ತದೆ.

ವಾಟ್ಸಾಪ್, ಟೆಲಿಗ್ರಾಮ್ ಅಥವಾ ಅಪರಿಚಿತ ಲಿಂಕ್‌ಗಳ ಮೂಲಕ ಬರುವ ಎಪಿಕೆ ಫೈಲ್‌ಗಳನ್ನು ಕ್ಲಿಕ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬೇಡಿ. ಇವುಗಳಲ್ಲಿ ವೈರಸ್ ಅಥವಾ ಬ್ಯಾಂಕ್ ಖಾಲಿ ಮಾಡುವ ಮಾಲ್‌ವೇರ್ ಇರಬಹುದು. ಯಾವಾಗಲೂ ಗೂಗಲ್ ಪ್ಲೇ ಸ್ಟೋರ್ (Google Play Store) ನಂತಹ ಅಧಿಕೃತ ಮೂಲಗಳಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಸುರಕ್ಷಿತ.


Spread the love

About Laxminews 24x7

Check Also

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ – ರೈತರ ಮೊಗದಲ್ಲಿ ಮೂಡಿದ ಸಂತಸ

Spread the loveಮಡಿಕೇರಿ: ಕೊಡಗು  ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಬಿರುಸುಗೊಂಡಿದೆ. ಮಳೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ