ಲಕ್ನೋ: ಉತ್ತರ ಪ್ರದೇಶದಿಂದ ಅಕ್ಟೋಬರ್ 16 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಎಂಟು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಸಾಮಾಜಿಕ ಸಮೀಕರಣ ಹಾಗೂ ಪ್ರಮುಖ ಜಾತಿಗಳ ಸಮತೋಲನ ಕಾಯ್ದುಕೊಂಡು ಪಟ್ಟಿ ಸಿದ್ಧಪಡಿಸಲಾಗಿದ್ದು, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಪ್ರಮುಖ ನಾಯಕರಿಗೆ ಟಿಕೆಟ್ ಕೈತಪ್ಪಿರುವುದು ಅಚ್ಚರಿಗೆ ಕಾರಣವಾಗಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಕೇಂದ್ರ ರಾಜ್ಯ ಸಚಿವ ಬಿ.ಎಲ್. ವರ್ಮಾ ಹಾಗೂ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೆಸರುಗಳು ಈ ಬಾರಿ ಪಟ್ಟಿಯಲ್ಲಿರಲಿವೆ ಎಂಬ ನಿರೀಕ್ಷೆಯಿತ್ತು. ಆದರೆ ಇವರಿಗೆ ಟಿಕೆಟ್ ನೀಡದಿರುವುದು ಕೇಂದ್ರ ಸಚಿವ ಸಂಪುಟ ಪುನಾರಚನೆಯ ಸುಳಿವನ್ನು ನೀಡಿದೆ.
ಧರಂಪಾಲ್ ಸಿಂಗ್(ಉತ್ತರ ಪ್ರದೇಶ ರಾಜ್ಯ ಸಚಿವ), ರಾಧಾಕಾಂತ್ ಓಜಾ(ಹಿರಿಯ ವಕೀಲರು), ಪ್ರಕಾಶ್ ಪಾಲ್ (ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ), ವಿದ್ಯಾಸಾಗರ್ ಸೋಂಕರ್(ಮಾಜಿ ಸಂಸದ), ಗೋಪಿಕೃಷ್ಣ ಪಾಂಡೆ, ಪ್ರಿಯಾಂಕಾ ಸಿಂಗ್ ರಾವತ್ (ಮಾಜಿ ಸಂಸದೆ), ರಾಮ್ ಪ್ರತಾಪ್ ಸಿಂಗ್ ಚೌಹಾಣ್(ರಾಜ್ಯ ಪ್ರಧಾನ ಕಾರ್ಯದರ್ಶಿ), ಶ್ರುತಿ ಗಂಗ್ವಾರ್ (ಜಾರ್ಖಂಡ್ ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರ ಪುತ್ರಿ) ಅವರಿಗೆ ಟಿಕೆಟ್ ನೀಡಿದೆ.
ಮುಂಬರುವ ಮಹತ್ವದ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಜಾತಿ ಸಮತೋಲನಕ್ಕೆ ಹೆಚ್ಚಿನ ಒತ್ತು ನೀಡಿದೆ ಮೂವರು ಒಬಿಸಿ, ಸಾಮಾನ್ಯ ವರ್ಗದ ಮೂವರು(ಇಬ್ಬರು ಬ್ರಾಹ್ಮಣರು ಹಾಗೂ ಒಬ್ಬ ರಜಪೂತ ಸಮುದಾಯದವರು) ಪರಿಶಿಷ್ಟ ಜಾತಿಯ ಇಬ್ಬರನ್ನು ಕಣಕ್ಕಿಳಿಸಿದೆ.
ಘೋಷಿತ ಎಲ್ಲಾ ಎಂಟು ಮಂದಿ ಬಿಜೆಪಿ ಅಭ್ಯರ್ಥಿಗಳು ನಾಳೆ (ಮಂಗಳವಾರ) ಬೆಳಿಗ್ಗೆ 11:30 ಕ್ಕೆ ಲಕ್ನೋದಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಉಪಸ್ಥಿತರಿರಲಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಎಕ್ಸ್ ನಲ್ಲಿ ಅಭಿನಂದನೆ ಸಲ್ಲಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಂದು ಘೋಷಣೆಯಾದ ಎಲ್ಲಾ ಗೌರವಾನ್ವಿತ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರತಿಯೊಬ್ಬರ ಐತಿಹಾಸಿಕ ವಿಜಯಕ್ಕಾಗಿ ಅನಂತ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದಾರೆ.
Laxmi News 24×7