ಬೆಂಗಳೂರು: ಸುಪ್ರೀಂ ಕೋರ್ಟ್ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಸೋಮಶೇಖರ್ ಅವರನ್ನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಅಂದಿನ ಜೈಲು ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಹಾಗೂ ಸದ್ಯ ಡಿಐಜಿ ಹುದ್ದೆಯಲ್ಲಿರುವ ಸೋಮಶೇಖರ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
2018 ರಲ್ಲಿ ನಕಲಿ ಆದೇಶ ಸೃಷ್ಟಿಸಿ ಕೈದಿ ಬಿಡುಗಡೆ
2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿಯನ್ನ ಸುಪ್ರೀಂ ಕೋರ್ಟ್ನ ನಕಲಿ ಆದೇಶದ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಶಂಕರ್ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ನಕಲಿ ಆದೇಶವನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ನಕಲಿ ದಾಖಲೆಯನ್ನ ಜೈಲಿನ ಎಸ್ಡಿಎ ಆಗಿದ್ದ ಶ್ರೀಕಾಂತ್ ಎಸ್. ಎಂಬಾತ ಸೃಷ್ಟಿಸಿದ್ದಾನೆ ಎಂಬ ಆರೋಪವಿದೆ.
ನಕಲಿ ಆದೇಶದ ಆಧಾರದ ಮೇಲೆ 2018ರ ನವೆಂಬರ್ 13ರಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ನನ್ನ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೈದಿ ಶಂಕರ್ ಹಾಗೂ ನಕಲಿ ಆದೇಶ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಶ್ರೀಕಾಂತ್ ಎಸ್. ಇಬ್ಬರನ್ನೂ ಈಗಾಗಲೇ ಬಂಧನ ಮಾಡಲಾಗಿದೆ. ಇದೀಗ ಪ್ರಕರಣದಲ್ಲಿ ಅಂದಿನ ಜೈಲು ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಸೋಮಶೇಖರ್ ಅವರ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸರು ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Laxmi News 24×7