Breaking News

ಡಿಸೆಂಬರ್ – ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ: ಡಿಸಿಎಂ ಪರಮೇಶ್ವರ್‌

Spread the love

ಬೆಂಗಳೂರು: ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಯೋಜನೆಯಡಿ ಡಿಸೆಂಬರ್‌–ಜನವರಿಯಲ್ಲಿ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನ ಹಂಚಿಕೆ  ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್‌  ತಿಳಿಸಿದರು.

ವಿಕಾಸಸೌಧದಲ್ಲಿ ಡಿಸಿ ಮತ್ತು ಎಸಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 15 ಲಕ್ಷ ನಿವೇಶನಗಳನ್ನ ಒದಗಿಸುವ ಘೋಷಣೆ ಮಾಡಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳು 24 ಸಾವಿರ ಎಕರೆ ಭೂಮಿಯನ್ನು ಗುರುತಿಸಿದ್ದಾರೆ. ಈ ಭೂಮಿಯಲ್ಲಿ ಬಡಾವಣೆಗಳನ್ನ ನಿರ್ಮಿಸಿ ನಿವೇಶನ ಹಂಚಿಕೆ ಮಾಡಲಾಗುವುದು. ಒಂದು ಎಕರೆಗೆ ಸುಮಾರು 30ರಿಂದ 40 ನಿವೇಶನಗಳನ್ನು ರೂಪಿಸಬಹುದು. ಭೂಮಿ ಖರೀದಿ ಸೇರಿದಂತೆ ಪ್ರತಿ ಎಕರೆಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ. ನಿವೇಶನ ಹಂಚಿಕೆ ಪ್ರಕ್ರಿಯೆಯನ್ನ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.

1 ವರ್ಷದಲ್ಲಿ 10 ಲಕ್ಷ ಪೋಡಿ ಅರ್ಜಿ ವಿಲೇವಾರಿಗೆ ಸೂಚನೆ
ರಾಜ್ಯದಲ್ಲಿ ಸುಮಾರು 10 ಲಕ್ಷ ದರ್ಖಾಸ್ತು ಪೋಡಿ ಅರ್ಜಿಗಳು ಬಾಕಿ ಉಳಿದಿವೆ. ಪ್ರಸ್ತುತ ಇರುವ ವೇಗದಲ್ಲಿ ಇವುಗಳನ್ನು ವಿಲೇವಾರಿ ಮಾಡಲು ಸುಮಾರು 30 ವರ್ಷಗಳು ಬೇಕಾಗಬಹುದು. ಹೀಗಾಗಿ, ಒಂದು ವರ್ಷದೊಳಗೆ ಎಲ್ಲಾ ಅರ್ಜಿಗಳನ್ನ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನ ಕಲ್ಪಿಸಲಾಗುವುದು ಎಂದು ತಿಳಿಸಿದರು.

136 ಕೋಟಿ ಪುಟಗಳ ದಾಖಲೆಗಳ ಡಿಜಿಟಲೀಕರಣ
ರಾಜ್ಯದಲ್ಲಿ ಒಟ್ಟು 136 ಕೋಟಿ ಪುಟಗಳ ಭೂ ದಾಖಲೆಗಳಿದ್ದು, ಬಹುತೇಕ ದಾಖಲೆಗನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ 32 ಕೋಟಿ ಪುಟಗಳ ದಾಖಲೆಗಳ ಡಿಜಿಟಲೀಕರಣ ಬಾಕಿಯಿದ್ದು, ಅದನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಭೂ ದಾಖಲೆಗಳಿಗೆ 16ಎ ಏಕೈಕ ದಾಖಲೆ
ಭೂಮಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನ ಒಂದೇ ದಾಖಲೆಯಲ್ಲಿ ಒದಗಿಸುವ ಉದ್ದೇಶದಿಂದ 16ಎ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಹಿಂದೆ ಭೂಮಾಲೀಕರು ಪಹಣಿ, ಆಕಾರಬಂದ್‌, ನಕ್ಷೆ, ಕ್ರಾಪ್ ಸರ್ಟಿಫಿಕೆಟ್ ಸೇರಿದಂತೆ ವಿವಿಧ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡಬೇಕಿತ್ತು. ಇವೆಲ್ಲವನ್ನೂ ಒಟ್ಟುಗೂಡಿಸಿ 16ಎ ಎಂಬ ಏಕೈಕ ದಾಖಲೆಯನ್ನು ಸಿದ್ಧಪಡಿಸಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಲಾಗುತ್ತಿದೆ. ಒಟ್ಟು 2.1 ಕೋಟಿ ದಾಖಲೆಗಳ ಪೈಕಿ ಈಗಾಗಲೇ 9.5 ಲಕ್ಷ 16ಎ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ನಾಮಮಾತ್ರ ಶುಲ್ಕ ನಿಗದಿಪಡಿಸಲಾಗುತ್ತದೆ. ಶೀಘ್ರದಲ್ಲೇ ಈ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು. ಈ ಯೋಜನೆಯ ಕುರಿತು ಕೇಂದ್ರ ಸರ್ಕಾರದ ಅಧಿಕಾರಿಗಳೂ ಅಧ್ಯಯನ ನಡೆಸುತ್ತಿದ್ದಾರೆ ಎಂದು ಪರಮೇಶ್ವರ್‌ ಹೇಳಿದರು.

ಬಾಕಿ ಪ್ರಕರಣಗಳ ವಿಲೇವಾರಿಗೆ ಗಡುವು
ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಪ್ರಕರಣ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿಯಬಾರದು. ಜಿಲ್ಲಾಧಿಕಾರಿಗಳಿಗೆ 1 ವರ್ಷ, ಉಪವಿಭಾಗಾಧಿಕಾರಿಗಳಿಗೆ ಆರು ತಿಂಗಳು ಹಾಗೂ ತಹಶೀಲ್ದಾರ್‌ಗಳಿಗೆ 90 ದಿನಗಳ ಗಡುವು ನಿಗದಿಪಡಿಸಲಾಗಿದೆ. ನಿಗದಿತ ಅವಧಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಲಾಗಿದೆ ಎಂದರು.


Spread the love

About Laxminews 24x7

Check Also

ಡಿಸೆಂಬರ್ – ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ: ಡಿಸಿಎಂ ಪರಮೇಶ್ವರ್‌

Spread the loveಬೆಂಗಳೂರು: ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಯೋಜನೆಯಡಿ ಡಿಸೆಂಬರ್‌–ಜನವರಿಯಲ್ಲಿ ಮೊದಲ ಹಂತದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ