ಬೆಂಗಳೂರು: ಚುನಾವಣಾ ಆಯೋಗಕ್ಕೆ ಎನ್ಡಿಎ ನಾಯಕರು ದೂರು ಕೊಡಲಿ. ಅದರ ಜೊತೆಗೆ ನಾವು ಕೊಟ್ಟ ದೂರಿನ ಮೇಲೆ ಚುನಾವಣೆ ಆಯೋಗ FIR ದಾಖಲು ಮಾಡಬೇಕು ಅಂತ ಡಿಸಿಎಂ ಪರಮೇಶ್ವರ್ ಆಗ್ರಹಿಸಿದ್ದಾರೆ.
ಫಾರಂ-7 ದುರುಪಯೋಗದ ಕುರಿತು ಎನ್ಡಿಎ ಯಿಂದ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಯೋಗದವರು ತಮ್ಮ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಸಾಕ್ಷಿ ಸಹಿತ ದೂರು ನೀಡಿದ್ದೇವೆ. ಫಾರಂ ನಂಬರ್ 7 ಅನ್ನು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದದ್ದನ್ನ ರೆಡ್ ಹ್ಯಾಂಡಾಗಿ ನಾವು ಹಿಡ್ಕೊಂಡು ಅದನ್ನ ಕೊಟ್ಟಿದ್ದೇವೆ. ಒಬ್ಬ ವ್ಯಕ್ತಿ ಎಷ್ಟು ಫಾರಂ ನಂಬರ್-7 ಸಲ್ಲಿಸಬಹುದು? ಅದಕ್ಕೆ ಇತಿಮಿತಿ ಇಲ್ಲವೇ? ಒಬ್ಬರೇ 100, 200, 400 ಅರ್ಜಿಗಳನ್ನ ಸಲ್ಲಿಸಿದರೆ ಅದು ಯಾವ ರೀತಿ ಸಾಧ್ಯ? ಎಂದು ಪ್ರಶ್ನಿಸಿದರು.
ಒಂದೇ ಒಂದು ಸಮುದಾಯದವರನ್ನ ಗುರುತಿಸಿಕೊಂಡು, ಫಾರಂಗಳನ್ನ ಎಲ್ಲಿಯೋ ಮುದ್ರಿಸಿ ತರಲಾಗುತ್ತಿದೆ. ಅವರ ಡೇಟಾವನ್ನ ಅವರಿಗೆ ಯಾರು ಕೊಟ್ಟರು? ಆ ಡೇಟಾ ಎಲ್ಲಿಂದ ಸಿಕ್ಕಿತು? ಮುದ್ರಿತ ಫಾರಂಗಳ ಮೇಲೆ ಅವರ ಹೆಸರು ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಬರೆದು ಸಲ್ಲಿಸಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.
ಈ ಎಲ್ಲವನ್ನೂ ನಾವು ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಚುನಾವಣಾ ಆಯೋಗವು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ 7 ದಿನಗಳ ಸಮಯ ಕೊಟ್ಟು, ನಂತರ ಎಫ್ಐಆರ್ ದಾಖಲಿಸುವುದಾಗಿ ಹೇಳಿದೆ. ಅದನ್ನು ಅವರು ಮಾಡಬೇಕು. ನಾವು ಗುರುತಿಸಿ ನೀಡಿರುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
Laxmi News 24×7