Breaking News

ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಲ್ಲ- ನೈಸ್‌ಗೆ ಸುಪ್ರೀಂನಲ್ಲಿ ಹಿನ್ನಡೆ

Spread the love

ನವದೆಹಲಿ: ರಾಜ್ಯದಲ್ಲಿ ನೈಸ್ ರಸ್ತೆ ಅಕ್ರಮಗಳ ವಿಚಾರ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನೈಸ್ ಯೋಜನೆ ವಿರುದ್ಧ ಸ್ವತಂತ್ರ ತನಿಖೆ ಹಾಗೂ ಫೋರೆನ್ಸಿಕ್ ಆಡಿಟ್‌ಗೆ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪಿಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

ನೈಸ್ ಪರ ವಕೀಲರು ವಾದ ಮಂಡಿಸಿ, ಯೋಜನೆಯ ಶೇ. 25ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಸುಮಾರು 1,100 ಎಕರೆ ಭೂಮಿಯನ್ನು ಬಳಸಿಕೊಳ್ಳಲಾಗಿದ್ದು, ರೈತರಿಗೆ ಪರಿಹಾರವನ್ನೂ ವಿತರಿಸಲಾಗಿದೆ. ಆದ್ದರಿಂದ ಹೈಕೋರ್ಟ್ ಆದೇಶಕ್ಕೆ ತಕ್ಷಣವೇ ತಡೆ ನೀಡಬೇಕು ಅಥವಾ ಕನಿಷ್ಠ ಯಥಾಸ್ಥಿತಿ  ಕಾಯ್ದುಕೊಳ್ಳಲು ಆದೇಶಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಂತ್ರಸ್ತ ರೈತರ ಪರ ವಕೀಲರು, ಈವರೆಗೂ ರೈತರಿಗೆ ನ್ಯಾಯಯುತ ಪರಿಹಾರ ಸಂದಾಯವಾಗಿಲ್ಲ. ಬರೋಬ್ಬರಿ 23 ವರ್ಷಗಳಿಗೂ ಹೆಚ್ಚು ಕಾಲದಿಂದ ರೈತರ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇಲ್ಲಿ ವ್ಯವಸ್ಥಿತ ಅಕ್ರಮ ನಡೆದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದೇ ವೇಳೆ ರಾಜ್ಯ ಸರಕಾರದ ಪರ ವಕೀಲರು ಹಾಜರಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಗಣಿಸಬೇಕು ಎಂದು ಕೋರಿದರು.

ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಸಮಗ್ರ ವಿಚಾರಣೆ ನಡೆಸದೆ ಯಾವುದೇ ಮಧ್ಯಂತರ ಆದೇಶ ಅಥವಾ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿತು. ಮುಂದಿನ ವಿಚಾರಣೆಯನ್ನು ನವೆಂಬರ್ 2ಕ್ಕೆ ನಿಗದಿಪಡಿಸಿದ್ದು, ಅಂದು ಎಲ್ಲಾ ಅರ್ಜಿದಾರರ ವಾದವನ್ನು ಆಲಿಸುವುದಾಗಿ ಸ್ಪಷ್ಟಪಡಿಸಿದೆ.

ಹೈಕೋರ್ಟ್‌ ಆದೇಶದಲ್ಲಿ ಏನಿದೆ?
ಹೈಕೋರ್ಟ್ ತನ್ನ ಆದೇಶದಲ್ಲಿ ನೈಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ರೈತರ ಭೂಮಿ ಮತ್ತು ತಲೆಮಾರುಗಳ ಜೀವನೋಪಾಯವನ್ನು ಕಸಿದುಕೊಂಡಿದ್ದನ್ನು ಹೊರತುಪಡಿಸಿದರೆ ಈ ಯೋಜನೆಯಿಂದ ಸಾರ್ವಜನಿಕರಿಗೆ ಯಾವುದೇ ಒಳ್ಳೆಯದಾಗಿಲ್ಲ.

ರಸ್ತೆ, ಕೆರೆ ಹಾಗೂ ಸರಕಾರಿ ಜಮೀನುಗಳನ್ನು ಅತಿಕ್ರಮಿಸಿಕೊಂಡು ಭಾರೀ ಮೊತ್ತದ ಟೋಲ್ ಸಂಗ್ರಹಿಸಲಾಗಿದೆ. ರೈತರಿಗೆ ಸೂಕ್ತ ಪರಿಹಾರ ನೀಡದೆ ಜಮೀನು ವಶಪಡಿಸಿಕೊಳ್ಳಲಾಗಿದ್ದು, ಸರಕಾರವೂ ಈ ಅಕ್ರಮಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನೈಸ್ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖೆ ಹಾಗೂ ಫೋರೆನ್ಸಿಕ್ ಆಡಿಟಿಂಗ್ (Forensic Audit) ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು.


Spread the love

About Laxminews 24x7

Check Also

ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೆ SIT ರಚನೆ: ಪ್ರಿಯಾಂಕ್ ಖರ್ಗೆ

Spread the loveಬೆಂಗಳೂರು: ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಫಾರ್ಮ್-7 ದುರ್ಬಳಕೆ ಬಗ್ಗೆ ವಿಶೇಷ ತನಿಖಾ ತಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ