ನವದೆಹಲಿ: ಗಡಿಪಾರು ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದ್ದು, ಕಾನೂನು ಪ್ರಕಾರ ಸೂಕ್ತ ಸಕ್ಷಮ ಪ್ರಾಧಿಕಾರವನ್ನೇ ಸಂಪರ್ಕಿಸುವಂತೆ ನಿರ್ದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ ಮಹೇಶ್ ಶೆಟ್ಟಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯ ಈಗಾಗಲೇ ವಜಾಗೊಳಿಸಿರುವುದನ್ನು ಪ್ರಸ್ತಾಪಿಸಿತು. ಲಭ್ಯವಿರುವ ಶಾಸನಬದ್ಧ ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದರ ಕುರಿತು ನ್ಯಾಯಪೀಠ ಪ್ರಶ್ನಿಸಿತು.
ಮಹೇಶ್ ಶೆಟ್ಟಿ ಅವರ ಪರ ವಾದ ಮಂಡಿಸಿದ ವಕೀಲರು, ಈ ಗಡಿಪಾರು ಪ್ರಕರಣವನ್ನು ‘ಸೌಜನ್ಯ ಪ್ರಕರಣ’ಕ್ಕೆ ಸಂಯೋಜಿಸಲು ಯತ್ನಿಸಿದರು ಹಾಗೂ ಸ್ಥಳೀಯ ದೇವಸ್ಥಾನಕ್ಕೆ ಸಂಬಂಧಿಸಿದ ವ್ಯಕ್ತಿಗಳು ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವಾದಿಸಿದರು. ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತೀವ್ರವಾಗಿ ತಿರಸ್ಕರಿಸಿದ್ದು, ಅಸಂಬಂಧಿತ ವಿಷಯಗಳನ್ನು ಬಳಸಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವುದು ಅಥವಾ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.
ಒಂದು ವೇಳೆ ಮಹೇಶ್ ಶೆಟ್ಟಿ ಅವರಿಗೆ ಗಡಿಪಾರು ಆದೇಶದ ಕುರಿತು ಆಕ್ಷೇಪಣೆಗಳಿದ್ದರೆ, ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸುವ ಮೂಲಕ ಸೂಕ್ತ ಕಾನೂನು ಪರಿಹಾರ ಪಡೆದುಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಅರ್ಜಿದಾರರಿಗೆ ಯಾವುದೇ ರೀತಿಯ ಪರಿಹಾರ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿತು. ಇದೇ ವೇಳೆ ಊಹಾತ್ಮಕ ವಾದಗಳನ್ನು ಮಂಡಿಸುವುದರ ವಿರುದ್ಧ ವಕೀಲರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ನ್ಯಾಯಪೀಠವು, ಈ ನ್ಯಾಯಾಲಯದಲ್ಲಿ ಜೂಜಾಟವಾಡಬೇಡಿ, ಒಮ್ಮೆ ಬಾಜಿ ಕಟ್ಟಿದರೆ ಮುಗಿಯಿತು, ಈ ನ್ಯಾಯಾಲಯದಲ್ಲಿ ಅಂತಹ ಅವಕಾಶಗಳಿಗೆ ಆಸ್ಪದವಿಲ್ಲ ಎಂದು ಮೌಖಿಕವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಪ್ರಕರಣ ಏನು?
ಅಪರಾಧ ಹಿನ್ನೆಲೆಯುಳ್ಳ ಕಾರಣಕ್ಕೆ ಮತ್ತು ನಿರಂತರವಾಗಿ ಸಮಾಜದ ಸ್ವಾಸ್ಥ್ಯ ಕೆಡಿಸಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕರ್ನಾಟಕ ಹೈಕೋರ್ಟ್ ಕೂಡಾ ಈ ಹಿಂದೆ ಗಡಿಪಾರು ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು.
Laxmi News 24×7