ಚೆನ್ನೈ: ಆಗ್ರಾದಲ್ಲಿ ರೈಲಿನ ಕೆಂಪು ಸೂಟ್ಕೇಸ್ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾದ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಚೆನ್ನೈನ ಗುಡುವಂಚೇರಿ ಪ್ರದೇಶದಲ್ಲಿರುವ ಬಾಡಿಗೆ ಮನೆಯೊಂದನ್ನು ಪತ್ತೆಹಚ್ಚಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇದೇ ಮನೆಯಲ್ಲಿ ಮಹಿಳೆಯನ್ನ ಹತ್ಯೆ ಮಾಡಿ ದೇಹವನ್ನು ತುಂಡುಗಳಾಗಿ ಕತ್ತರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ, ಓರ್ವ ಪುರುಷ ಮತ್ತು ಮಹಿಳೆ ಕೆಂಪು ಸೂಟ್ಕೇಸ್ನ್ನು ಹೊತ್ತು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಪ್ರವೇಶಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಅವರು ಆ ಸೂಟ್ಕೇಸ್ನ್ನು ದೆಹಲಿಗೆ ತೆರಳುವ ತಮಿಳುನಾಡು ಎಕ್ಸ್ಪ್ರೆಸ್ ರೈಲಿನಲ್ಲಿ ಬಿಟ್ಟು ಹೋಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆರೋಪಿಗಳ ಗುರುತು ಹಾಗೂ ಅವರ ನಡುವಿನ ಸಂಬಂಧ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಸುಳಿವು ಸಿಕ್ಕಿದ್ದು ಹೇಗೆ?
ಆಗಸ್ಟ್ 6ರಂದು ಆಗ್ರಾ ಕ್ಯಾಂಟ್ ರೈಲು ನಿಲ್ದಾಣದ ಜನರಲ್ ಬೋಗಿಯಲ್ಲಿ ಅನುಮಾನಾಸ್ಪದ ಕೆಂಪು ಸೂಟ್ಕೇಸ್ ಪತ್ತೆಯಾಗಿತ್ತು. ಸೂಟ್ಕೇಸ್ನಿಂದ ಯಾವುದೋ ವಸ್ತು ಹೊರಗೆ ಕಾಣಿಸುತ್ತಿರುವ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಬಳಿಕ ಅದರೊಳಗೆ ಕೊಳೆತ ಸ್ಥಿತಿಯಲ್ಲಿದ್ದ ಮಾನವ ದೇಹದ ಭಾಗಗಳು ಪತ್ತೆಯಾಗಿದ್ದವು.
ಸಿಸಿಟಿವಿ ದೃಶ್ಯಗಳ ಸಮಗ್ರ ಪರಿಶೀಲನೆ ನಡೆಸಿದ ಪೊಲೀಸರು, ಸೂಟ್ಕೇಸ್ನೊಂದಿಗೆ ಕಾಣಿಸಿಕೊಂಡಿದ್ದ ಪುರುಷ ಮತ್ತು ಮಹಿಳೆಯ ಚಲನವಲನಗಳನ್ನ ಬೆನ್ನತ್ತಿದ್ದಾರೆ. ತನಿಖೆ ಮುಂದುವರಿದಂತೆ ಅವರ ಸುಳಿವು ಚೆನ್ನೈನ ಗುಡುವಂಚೇರಿಯಲ್ಲಿರುವ ಬಾಡಿಗೆ ಮನೆಯವರೆಗೆ ತಲುಪಿದೆ. ಮನೆಯಲ್ಲಿ ಮಹಿಳೆಯ ದೇಹವನ್ನ ಮೇಲ್ಛಾವಣಿಯಿಂದ ನೇಣು ಹಾಕಿರುವ ಸ್ಥಿತಿಯಲ್ಲಿ ಇರಿಸಲಾಗಿತ್ತು ಎಂಬ ಶಂಕೆಯೂ ತನಿಖೆಯಲ್ಲಿ ವ್ಯಕ್ತವಾಗಿದೆ.
ಇದಲ್ಲದೆ, ದೇಹದ ಕೆಲವು ಭಾಗಗಳನ್ನು ಸಾಮಾನ್ಯವಾಗಿ ಬಿರಿಯಾನಿ ತಯಾರಿಸಲು ಬಳಸುವ ದೊಡ್ಡ ಪಾತ್ರೆಯೊಂದರಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಪೊಲೀಸರು ಆ ಪಾತ್ರೆಯನ್ನು ವಶಕ್ಕೆ ಪಡೆದು, ಮನೆಯಲ್ಲಿರುವ ಇತರೆ ವಸ್ತುಗಳು ಮತ್ತು ಸ್ಥಳದಿಂದ ಸಿಗಬಹುದಾದ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಹತ್ಯೆ ಯಾವಾಗ ಮತ್ತು ಹೇಗೆ ನಡೆದಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಸೂಟ್ಕೇಸ್ನೊಳಗೆ ‘Chennai’ ಎಂದು ಬರೆದಿರುವ ಪಾಲಿಥಿನ್ ಚೀಲವೊಂದು ಕೂಡ ಪತ್ತೆಯಾಗಿದೆ. ಇದು ತನಿಖಾಧಿಕಾರಿಗಳಿಗೆ ಚೆನ್ನೈ ಸಂಪರ್ಕದ ಮತ್ತೊಂದು ಪ್ರಮುಖ ಸುಳಿವಾಗಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸೆಂಟ್ರಲ್ ಸೇರಿದಂತೆ ಹಲವು ಪ್ರದೇಶಗಳ ಸಿಸಿಟಿವಿ ದೃಶ್ಯಗಳು, ರೈಲು ಪ್ರಯಾಣದ ದಾಖಲೆಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆಕೆಯ ದೇಹದ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ಕಾರಣ ಮತ್ತು ಸಾವಿನ ಸ್ವರೂಪದ ಕುರಿತು ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆಯಿದೆ. ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದು, ಅವುಗಳ ಮೂಲಕ ಮೃತೆಯ ಗುರುತು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
Laxmi News 24×7