ಮಂಗಳೂರು: ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದಿದ್ದ ಪ್ರಮುಖ ಬಸ್ ತಂಗುದಾಣಕ್ಕೆ ‘ಮೀಡಿಯಾ ಮನಸುಗಳು’ ಸಂಘಟನೆಯ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿ ಹೊಸ ಕಳೆ ತಂದಿದ್ದಾರೆ. ಶ್ರಮದಾನದ ಮೂಲಕ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ, ಪ್ರಯಾಣಿಕರ ಬಳಕೆಗೆ ಮತ್ತೆ ಯೋಗ್ಯವಾಗಿಸಿದ್ದಾರೆ.
ಹಳೆಯಂಗಡಿಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿರುವ ಈ ಬಸ್ ತಂಗುದಾಣ ಕಳೆದ ಒಂದು ವರ್ಷದಿಂದ ಅವ್ಯವಸ್ಥೆಯಿಂದ ಕೂಡಿತ್ತು. ಕಟೀಲು ದೇಗುಲ ಹಾಗೂ ಕಿನ್ನಿಗೋಳಿ ಕಡೆಗೆ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾವಿರಾರು ಪ್ರಯಾಣಿಕರು ಈ ತಂಗುದಾಣವನ್ನು ಬಳಸುತ್ತಾರೆ.
ರಿಕ್ಷಾ ಪಾರ್ಕ್ ಬಳಿಯ ಕಟ್ಟಡದ ಶೌಚಾಲಯದ ನೀರು, ಕೊಳಚೆ ನೀರು ಹಾಗೂ ಮಳೆನೀರು ಸರಿಯಾಗಿ ಹರಿದು ಹೋಗದೆ ತಂಗುದಾಣದ ಸುತ್ತಮುತ್ತಲೇ ನಿಲ್ಲುತ್ತಿತ್ತು. ಇದರಿಂದಾಗಿ ಪೊದೆಗಳು ಬೆಳೆದು, ಕಸದ ರಾಶಿ, ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಕೊಳೆತ ವಸ್ತುಗಳು ತುಂಬಿಕೊಂಡಿದ್ದವು. ಪರಿಸರದಲ್ಲಿ ದುರ್ವಾಸನೆಯೂ ಹೆಚ್ಚಾಗಿತ್ತು.
ರಾತ್ರಿ ವೇಳೆಯಲ್ಲಿ ಈ ಸ್ಥಳ ಕುಡುಕರ ಅಡ್ಡೆಯಾಗಿತ್ತು ಎನ್ನಲಾಗಿದ್ದು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತಂಗುದಾಣದೊಳಗೆ ಹೋಗಲು ಕೂಡ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಮರಗಿಡಗಳು ತಾಗಿಕೊಂಡಿದ್ದರಿಂದ ಗಾಳಿ-ಮಳೆಯ ಸಂದರ್ಭದಲ್ಲಿ ವಿದ್ಯುತ್ ಅವಘಡದ ಆತಂಕವೂ ಇತ್ತು.
ಈ ಬಗ್ಗೆ ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಹಲವು ಬಾರಿ ವರದಿಗಳು ಪ್ರಕಟವಾಗಿದ್ದರೂ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ‘ಮೀಡಿಯಾ ಮನಸುಗಳು’ ಸಂಘಟನೆಯ ಸದಸ್ಯರು ತಾವೇ ಮುಂದೆ ಬಂದು ಸ್ವಚ್ಛತಾ ಕಾರ್ಯಕ್ಕೆ ಕೈ ಹಾಕಿದರು. ಸ್ಥಳಕ್ಕೆ ಆಗಮಿಸಿದ ಸದಸ್ಯರು ಶ್ರಮದಾನದ ಮೂಲಕ ತಂಗುದಾಣದಲ್ಲಿದ್ದ ಕಸ, ಮಣ್ಣು, ಪಾಚಿ ಹಾಗೂ ಬೆಳೆದು ನಿಂತಿದ್ದ ಪೊದೆಗಳನ್ನು ತೆರವುಗೊಳಿಸಿದರು.
ಮೆಸ್ಕಾಂ ಸಿಬ್ಬಂದಿಯ ನೆರವಿನಿಂದ ಹೈಟೆನ್ಷನ್ ತಂತಿಗೆ ತಾಗಿದ್ದ ಮರಗಿಡಗಳನ್ನು ಕೂಡ ತೆರವುಗೊಳಿಸಲಾಯಿತು. ಬಳಿಕ ಇಡೀ ಬಸ್ ತಂಗುದಾಣವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಲಾಗಿದ್ದು, ಚರಂಡಿ ಹಾಗೂ ಬಸ್ ತಂಗುದಾಣದ ಬೋರ್ಡ್ ಅನ್ನೂ ಶುಚಿಗೊಳಿಸಲಾಯಿತು.
ಈ ಸಮಾಜಮುಖಿ ಕಾರ್ಯದಲ್ಲಿ ‘ಮೀಡಿಯಾ ಮನಸುಗಳು’ ಸಂಘಟನೆಯ ಪ್ರಮುಖರಾದ ಶಶಿ ಬೆಳ್ಳಾಯರು, ಬಾಲಕೃಷ್ಣ ಶೆಟ್ಟಿ ಸೂರಿಂಜೆ, ಶಿವು ಕುಲಾಲ್, ಸಂದೇಶ್ ಶೆಟ್ಟಿ, ಗಣೇಶ್ ಪಂಜ ಹಾಗೂ ಗಿರೀಶ್ ಮಣೇಲ್ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಮೆಸ್ಕಾಂ ಪವರ್ಮ್ಯಾನ್ ಶ್ರೀಕಾಂತ್ ಹಾಗೂ ಪೂಜಾ ಕೇಟರರ್ಸ್ ಮಾಲೀಕ ಜೈಕೃಷ್ಣ ಕೋಟ್ಯಾನ್ ಅವರು ಕೂಡ ಕಾರ್ಯಕ್ಕೆ ಕೈಜೋಡಿಸಿ ಸಹಕಾರ ನೀಡಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದಿದ್ದ ಬಸ್ ತಂಗುದಾಣವನ್ನು ಯುವಕರ ತಂಡ ಸ್ವತಃ ಮುಂದೆ ನಿಂತು ಸ್ವಚ್ಛಗೊಳಿಸಿ ಪ್ರಯಾಣಿಕರ ಬಳಕೆಗೆ ಯೋಗ್ಯವಾಗಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Laxmi News 24×7