ಹಾವೇರಿ: ಶಿಗ್ಗಾವಿಯ ಹನುಮಾನ್ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿ ಪ್ರಜ್ಞಾಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಿದ್ದು, ಅವನು ಕೋಮು ಗಲಭೆ ಸೃಷ್ಟಿಸುವ ಕೆಲಸ ಮಾಡಿದ್ದಾನೆ. ಪೊಲೀಸರು ಅವನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಬಂದ್‌ಗೆ ಎಲ್ಲ ಕೋಮಿನವರೂ ಬೆಂಬಲ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಆಗಸ್ಟ್ 21ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿರುವ ಶ್ರೀ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇದು ಅತ್ಯಂತ ಹೇಯ ಹಾಗೂ ಕ್ಷಮಿಸಲಾರದ ಕೃತ್ಯ. ದೇವಸ್ಥಾನ ರಸ್ತೆಗಿಂತ ಎತ್ತರದಲ್ಲಿದ್ದು, ಗೇಟ್ ಕೂಡ ಇದೆ. ಗೇಟ್ ತೆಗೆದು ಒಳಗೆ ಪ್ರವೇಶಿಸಿ ಹನುಮಂತ ದೇವರ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಲಾಗಿದೆ. ಆತ ಕುಡಿತದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಅನಿಸುವುದಿಲ್ಲ. ಉದ್ದೇಶಪೂರ್ವಕವಾಗಿಯೇ ಮಾಡಿರುವ ಸಾಧ್ಯತೆ ಇದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.
ಈ ಘಟನೆಯನ್ನು ಪ್ರತ್ಯೇಕವಾಗಿ ನೋಡಬಾರದು ಎಂದು ಹೇಳಿದ ಅವರು, ಶಿಗ್ಗಾವಿಯಲ್ಲಿ ಕೊಲೆ ಮಾಡಿ ಕುಟುಂಬದ ಮೇಲೆ ಒತ್ತಡ ಹೇರಿ ರಾಜಿ ಮಾಡಿಸಿದ ಪ್ರಕರಣ, ಸವಣೂರಿನಲ್ಲಿ ಶಿಕ್ಷಕನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ಸೇರಿದಂತೆ ಹಲವು ಘಟನೆಗಳನ್ನು ಉಲ್ಲೇಖಿಸಿದರು. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂದು ಆರೋಪಿಸಿದರು.
ಹಾನಗಲ್, ಹಾವೇರಿ ಹಾಗೂ ರಾಣೆಬೆನ್ನೂರು ಭಾಗಗಳಲ್ಲೂ ಇಂತಹ ಹಲವು ಘಟನೆಗಳು ನಡೆದಿವೆ. ರಾಣೆಬೆನ್ನೂರಿನಲ್ಲಿ ಅಕ್ರಮ ಕಸಾಯಿಖಾನೆ ವಿರುದ್ಧ ಪ್ರತಿಭಟನೆ ನಡೆಸಿದ ಭಜರಂಗದಳದ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಕೋಮು ಶಾಂತಿ ಕದಡುವ ಕೆಲಸ
ಶಿಗ್ಗಾವಿಯಲ್ಲಿ ಘಟನೆ ನಡೆದ ತಕ್ಷಣ ಟ್ಯಾಕ್ಸಿ ಸ್ಟ್ಯಾಂಡ್‌ನವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ ಪ್ರಕರಣ ಇಲ್ಲಿಗೇ ಮುಗಿಯಬಾರದು. ಆರೋಪಿಯ ಕೃತ್ಯದ ಹಿಂದೆ ಇರುವ ಉದ್ದೇಶದ ಬಗ್ಗೆ ಗಂಭೀರ ತನಿಖೆ ನಡೆಯಬೇಕು ಎಂದು ಬೊಮ್ಮಾಯಿ ಹೇಳಿದರು.
ಆರೋಪಿ ಹಾನಗಲ್ ತಾಲೂಕಿನ ಆಡೂರಿನವನು. ಶಿಗ್ಗಾವಿಯಲ್ಲಿ ಆತನಿಗೆ ಪಟ್ಟಾ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಶಾಸಕರಿಗೆ ‘ರಿಟರ್ನ್ ಗಿಫ್ಟ್’ ನೀಡಿದ್ದೇನೆ ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ. ಆತ ಈ ಮಾತನ್ನು ಪ್ರಜ್ಞೆ ಇಲ್ಲದೆ ಹೇಳಿದ್ದಾನೆಯೇ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಶಿಗ್ಗಾವಿ-ಸವಣೂರು ಭಾಗದಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ದೊಡ್ಡ ಕೋಮು ಸಂಘರ್ಷ ನಡೆಯದಂತೆ ಶಾಂತಿ ಕಾಪಾಡಲಾಗಿದೆ. ಆದರೆ ಇಂತಹ ಘಟನೆಗಳು ಕೋಮು ಗಲಭೆ ಸೃಷ್ಟಿಸಿ ಶಾಂತಿ ಕದಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪೊಲೀಸರು ಈಗ ಕ್ರಮ ಕೈಗೊಂಡರೂ ಪ್ರಕರಣ ಅಲ್ಲಿಗೇ ಮುಗಿಯುವುದಿಲ್ಲ. ಆರೋಪಿ ಜಾಮೀನಿನ ಮೇಲೆ ಹೊರಬಂದು ಮತ್ತೆ ಇದೇ ಪ್ರದೇಶದಲ್ಲಿ ಓಡಾಡುವಂತಾಗಬಾರದು. ಈ ಬಗ್ಗೆ ಕಠಿಣ ಕ್ರಮ ಅಗತ್ಯ ಎಂದು ಬೊಮ್ಮಾಯಿ ಹೇಳಿದರು.
ಟ್ಯಾಕ್ಸಿ ಸ್ಟ್ಯಾಂಡ್‌ನವರು ಹಾಗೂ ಪ್ರಮೋದ್ ಮುತಾಲಿಕ್ ಈಗಾಗಲೇ ಶಿಗ್ಗಾವಿ ಬಂದ್‌ಗೆ ಕರೆ ನೀಡಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ. ಯಾವುದೇ ಒಂದು ಕೋಮಿನ ವಿರುದ್ಧ ಅಥವಾ ಹಬ್ಬದ ವಿರುದ್ಧ ಈ ಬಂದ್ ಅಲ್ಲ. ವ್ಯಾಪಾರಸ್ಥರು ಸ್ವಯಂಪ್ರೇರಣೆಯಿಂದ ಬಂದ್‌ಗೆ ಬೆಂಬಲ ನೀಡಬೇಕು. ಯಾರ ಮೇಲೂ ಒತ್ತಡ ಹೇರಲಾಗುವುದಿಲ್ಲ. ಹಿಂಸಾಚಾರ ಮತ್ತು ಕೋಮು ಗಲಭೆ ನಡೆಯಬಾರದು ಎಂದರೆ ಎಲ್ಲ ಕೋಮಿನವರೂ ಬಂದ್‌ಗೆ ಬೆಂಬಲ ನೀಡಬೇಕು ಎಂದು ಬೊಮ್ಮಾಯಿ ಮನವಿ ಮಾಡಿದರು.
ಜಿಲ್ಲಾಡಳಿತದ ವಿರುದ್ಧ ಅಸಮಾಧಾನ
ಶಿಗ್ಗಾವಿ ಬಂದ್‌ಗೆ ಜಿಲ್ಲಾಡಳಿತ ಅವಕಾಶ ನೀಡುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಜಿಲ್ಲೆಯಲ್ಲಿ ಅಪರಾಧಿಗಳಿಗೆ ಭಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಹಳ್ಳಿಗಳಲ್ಲಿ ಇಸ್ಪೀಟ್, ಜೂಜಾಟ ಹಾಗೂ ಡ್ರಗ್ಸ್ ದಂಧೆ ನಡೆಯುತ್ತಿದೆ. ಈ ಬಗ್ಗೆ ಹಲವು ಬಾರಿ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಸರಾಸರಿ ಒಂದು ಗ್ರಾಮ ಪಂಚಾಯಿತಿಗೆ ಒಂದು ಜೂಜಾಟದ ಕ್ಲಬ್ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳ ವಿರುದ್ಧ ಜಿಲ್ಲಾಡಳಿತ, ಸರ್ಕಾರ, ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.
ರುದ್ರಪ್ಪ ಲಮಾಣಿಗೆ ತಿರುಗೇಟು
ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಇದು ಕಾಂಗ್ರೆಸ್‌ನ ಅಧಃಪತನವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಹಿರೇಕೆರೂರಿನಲ್ಲಿ ಕೊಲೆ ನಡೆದಾಗ ಹಾಗೂ ಹಾನಗಲ್‌ನಲ್ಲಿ ಗಲಾಟೆ ನಡೆದಾಗ ರುದ್ರಪ್ಪ ಲಮಾಣಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ನಾವು ಈ ಮಣ್ಣಿನ ಅನ್ನ ತಿಂದಿದ್ದೇವೆ. ಹೀಗಾಗಿ ನಾವು ಸತ್ಯ ಮಾತನಾಡುತ್ತೇವೆ ಎಂದು ತಿರುಗೇಟು ನೀಡಿದರು.
ನಾಗೇಂದ್ರ ರಾಜೀನಾಮೆ ಪಡೆದರೆ ಬರಗಾಲದ ಬಗ್ಗೆ ಚರ್ಚೆ
ಅಧಿವೇಶನದಲ್ಲಿ ಬರಗಾಲದ ಕುರಿತು ಬಿಜೆಪಿ ಚರ್ಚಿಸುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೂ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಒಂದು ತಿಂಗಳು ದೆಹಲಿಗೆ ಅಲೆದಾಡಿ ಸರ್ಕಾರ ಕಾಲಹರಣ ಮಾಡಿದೆ. ಇಡೀ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ, ಸರ್ಕಾರ ಇನ್ನೂ ಬರ ಘೋಷಣೆ ಮಾಡದೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು. ಬರಗಾಲದ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ ನಾಳೆಯೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲಿ. ಬಳಿಕ ನಾವು ಬರಗಾಲದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
Laxmi News 24×7