ಬೆಂಗಳೂರು; ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಲಾಲ್‌ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ಆದೇಶ ಮಾಡಿ ಎಂದು ಶಾಸಕ, ಮಾಜಿ ಸಚಿವ ಶಿವಾನಂದ ಪಾಟೀಲ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಆಲಮಟ್ಟಿ ಜಲಾಶಯ ಮುಂಗಾರಿನಲ್ಲಿ ಭರ್ತಿಯಾಗದಿದ್ದರೂ ಹಿಂಗಾರಿನಲ್ಲಿ ಭರ್ತಿಯಾಗುವ ವಿಶ್ವಾಸ ಇದೆ. ಜಲಾಶಯ ಹಿಂಗಾರಿನಲ್ಲೂ ಭರ್ತಿಯಾದ ಹಲವು ನಿದರ್ಶನಗಳಿವೆ. ಹೀಗಾಗಿ ಈಗಲೇ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದರೆ ಭವಿಷ್ಯದ ದಿನಗಳಲ್ಲಿ ನೀರಿನ ಕೊರತೆಯಾಗಬಹುದು ಎಂದು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
ಜಲಾಶಯದಲ್ಲಿ ಈಗ ಬಳಸಬಹುದಾದ ನೀರಿನ ಪ್ರಮಾಣ 70 ಟಿಎಂಸಿ ಅಡಿ ನೀರಿದೆ. ಜಲಾಶಯ ಭರ್ತಿಯಾಗಲು 35 ಟಿಎಂಸಿ ನೀರು ಅಗತ್ಯವಿದೆ. ಮುಂಗಾರು ಇನ್ನೂ ಮುಗಿದಿಲ್ಲ. ಹೀಗಾಗಿ ಜಲಾಶಯ ಭರ್ತಿಯಾಗುವ ವಿಶ್ವಾಸ ಇದೆ ಎಂದಿದ್ದಾರೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚೆ ಮಾಡಿದ ನಂತರ ನೀರು ಹರಿಸುವ ನಿರ್ಧಾರ ಕೈಗೊಳ್ಳುವತನಕ ಕಾದು ಕುಳಿತುಕೊಳ್ಳುವ ಸಮಯ ಇದಲ್ಲ. ಪರಿಸ್ಥಿತಿಯ ಗಂಭೀರತೆ ಹಿನ್ನೆಲೆಯಲ್ಲಿ ತಕ್ಷಣ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರತಿ ವರ್ಷ ಜಲಾಶಯ ಭರ್ತಿಯಾದ ನಂತರ ನೂರರಿಂದ ಇನ್ನೂರು ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಅಧಿಕಾರಿಗಳು ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಇನ್ನೂ ಹರಿದು ಬಂದಿಲ್ಲ ಎಂದು ಕಾಲುವೆಗಳಿಗೆ ನೀರು ಹರಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಹತ್ತರಿಂದ ಹದಿನೈದು ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾದ ನಂತರ ಕಾಲುವೆಗಳಿಗೆ ನೀರು ಬಿಡಬಹುದು ಎಂಬುದು ಅಧಿಕಾರಿಗಳ ನಿಲುವಾಗಿದೆ. ಆದರೆ ಈ ವಿಳಂಬ ನೀತಿಯಿಂದ ಸರ್ಕಾರ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ತಾವು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವು ಜನಪರ ವಿಚಾರಗಳಲ್ಲಿ ತುರ್ತು ಕ್ರಮಗಳನ್ನು ಕೈಗೊಂಡು ರಾಜ್ಯದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದೀರಿ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ವಿಚಾರದಲ್ಲೂ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಆಲಮಟ್ಟಿ ಜಲಾಶಯ ಹಿಂಗಾರಿನಲ್ಲಾದರೂ ಭರ್ತಿಯಾಗಲಿದ್ದು, ಯಾವುದೇ ಅನುಮಾನದ ಅಗತ್ಯವಿಲ್ಲ. ಹೀಗಾಗಿ ಜಲಾಶಯ ಭರ್ತಿಯಾಗದಿದ್ದರೆ ಮುಂದೆ ಹೇಗೆ? ಎಂದು ಆಲೋಚನೆ ಮಾಡದೆ ತಕ್ಷಣ ಕಾಲುವೆಗಳಿಗೆ ನೀರು ಹರಿಸಲು ಆದೇಶ ಮಾಡಬೇಕು ಎಂದು ಕೋರಿದ್ದಾರೆ.
Laxmi News 24×7