ನವದೆಹಲಿ: ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವವು 2031ರಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ‘ಜನ್ಮ ಶತಾಬ್ದಿ ಪಂಚವಾರ್ಷಿಕ ಯೋಜನೆ’ಯ ಅಧಿಕೃತ ಲಾಂಛನವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
ಭೇಟಿಯ ವೇಳೆ ಶ್ರೀ ವಿಶ್ವಪ್ರಸನ್ನ ತೀರ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡಗು ಶೈಲಿಯ ಯಕ್ಷಗಾನದ ಸಾಂಪ್ರದಾಯಿಕ ರಾಜಕಿರೀಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಇದರೊಂದಿಗೆ ಸ್ವರ್ಣ ಲೇಪಿತ ಕಾಲೀಯ ಕೃಷ್ಣನ ಪ್ರತಿಮೆ, ಫಲ ಹಾಗೂ ಮಂತ್ರಾಕ್ಷತೆ ನೀಡಿ ಗೌರವಿಸಿದರು. ಇತ್ತೀಚೆಗೆ ಪ್ರಧಾನಿಯವರ ಜನ್ಮದಿನದ ಅಂಗವಾಗಿ ಅವರ ಆಯುರಾರೋಗ್ಯ ಮತ್ತು ಶ್ರೇಯಸ್ಸಿಗಾಗಿ ನೆರವೇರಿಸಲಾಗಿದ್ದ ಪೂರ್ಣ ನವಗ್ರಹ ಹೋಮದ ಪ್ರಸಾದವನ್ನು ಶ್ರೀಗಳು ಪ್ರಧಾನಿಯವರಿಗೆ ಹಸ್ತಾಂತರಿಸಿದರು.
ಚಾತುರ್ಮಾಸ್ಯ ವ್ರತದ ಅವಧಿಯಲ್ಲಿ ದೇಶ ಮತ್ತು ಧರ್ಮದ ಒಳಿತಿಗಾಗಿ ಹೋಮ, ಹವನ, ಸತ್ಸಂಗ, ಜಪಯಜ್ಞ ಹಾಗೂ ಮಂತ್ರೋಪದೇಶ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಿರುವುದಕ್ಕೆ ಶ್ರೀಗಳು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಉಡುಪಿ ಮತ್ತು ದ್ವಾರಕೆಯ ನಡುವೆ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಗಾಢ ಸಂಬಂಧವಿದೆ. ಹೀಗಾಗಿ ಶ್ರೀ ವಿಶ್ವೇಶತೀರ್ಥರ ಜನ್ಮ ಶತಾಬ್ದ ಯೋಜನೆಯಲ್ಲಿ ದ್ವಾರಕೆಯನ್ನೂ ಒಳಪಡಿಸಿಕೊಂಡು ವಿಶೇಷ ಯೋಜನೆಗಳನ್ನು ರೂಪಿಸಿ ಎಂದು ಪೇಜಾವರ ಶ್ರೀಗಳಿಗೆ ಪ್ರಧಾನಿ ಸಲಹೆ ನೀಡಿದರು.
Laxmi News 24×7