Breaking News

ಡಿಜೆ ಸದ್ದಿಗೆ ಹಾರಿಹೋದ ಜೀವ – ನಗುನಗುತ್ತಲೇ ಇದ್ದ 2ನೇ ತರಗತಿ ಬಾಲಕಿ ಕುಸಿದು ಬಿದ್ದು ಸಾವು

Spread the love

ಲಕ್ನೋ: ಉತ್ತರ ಪ್ರದೇಶದ  ಬಲರಾಮ್‌ಪುರದಲ್ಲಿ 2ನೇ ತರಗತಿ ಬಾಲಕಿಯೊಬ್ಬಳು ಶಾಲೆಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ. ಶಾಲೆಯ ಮುಂಭಾಗ ಡಿಜೆ ಮೆರವಣಿಗೆ ಹಾದುಹೋದ ಕೆಲವೇ ಕ್ಷಣದಲ್ಲಿ ಬಾಲಕಿ ಹೃದಯಾಘಾತದಿಂದ  ಸಾವನ್ನಪ್ಪಿದ್ದಾಳೆ.

ತರಗತಿಯಲ್ಲಿದ್ದ ಸಿಸಿಟಿವಿಯಲ್ಲಿ ಬಾಲಕಿ ಕುಸಿದುಬಿದ್ದು ಸಾವನ್ನಪ್ಪಿದ ವಿಡಿಯೋ ಸೆರೆಯಾಗಿದೆ. ವಿಡಿಯೋದಲ್ಲಿ, ತರಗತಿಯಲ್ಲಿ ಜಗಳವಾಡುತ್ತಿದ್ದ ಇತರ ವಿದ್ಯಾರ್ಥಿಗಳತ್ತ ಬಾಲಕಿ ಬೆರಳು ತೋರಿಸಿ ನಗುತ್ತಿದ್ದಳು. ಇದಾದ ಕೆಲವೇ ಕ್ಷಣಗಳಲ್ಲಿ ಕುರ್ಚಿಯ ಮೇಲೆ ಕುಸಿದುಬಿದ್ದು ಆಕೆ ಮೃತಪಟ್ಟಿರುವುದು ದಾಖಲಾಗಿದೆ. ಸೆ.21ರ ಬೆಳಿಗ್ಗೆ ಸುಮಾರು 11 ಗಂಟೆಗೆ ಈ ದುರ್ಘಟನೆ ನಡೆದಿದೆ.

ಈ ಸಮಯದಲ್ಲಿ ಶಾಲೆಯ ಮುಂಭಾಗದಲ್ಲಿ ಮೂರ್ತಿ ವಿಸರ್ಜನಾ ಮೆರವಣಿಗೆಯೊಂದು ಸಾಗುತ್ತಿತ್ತು. ಈ ವೇಳೆ ಅಬ್ಬರದ ಡಿಜೆ ಹಾಕಲಾಗಿತ್ತು. ಆ ಶಬ್ಧ ಶಾಲೆಯ ಒಳಗೆಲ್ಲ ಪ್ರತಿಧ್ವನಿಸಿತ್ತು. ಈ ವೇಳೆ ಕೆಲವು ಮಕ್ಕಳು ಕಿಟಕಿ ಬಳಿ ನಿಂತು ಮೆರವಣಿಗೆ ನೋಡುತ್ತಿದ್ದರು. ಅದೇ ಸಮಯದಲ್ಲಿ ಬಾಲಕಿ ತೀವ್ರ ಅಸ್ವಸ್ಥತೆ ಉಂಟಾಗಿ ಕುಸಿದು ಬಿದ್ದಿದ್ದಾಳೆ.

ಆಕೆ ಸತತ ಮೂರು ಬಾರಿ ಹೃದಯಾಘಾತಕ್ಕೆ ಒಳಗಾದಳು ಎಂದು ಬಾಲಕಿಯ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಮೂರನೇ ಹೃದಯಾಘಾತದ ನಂತರ ಆಕೆಯ ಸ್ಥಿತಿ ಗಂಭೀರವಾಯಿತು. ಕೆಲವೇ ಕ್ಷಣಗಳಲ್ಲಿ ಆಕೆ ಮೃತಪಟ್ಟಳು. ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯದಲ್ಲಿ ಏನಿದೆ?
ಆರಂಭದಲ್ಲಿ ಬಾಲಕಿ ಕುರ್ಚಿಯ ಮೇಲೆ ಕುಸಿದು ಬಿದ್ದಿದ್ದಳು. ಆಗ ಆಕೆಯ ತಲೆಯು ಹಿಂದಿನ ಮೇಜಿನ ಕಡೆ ವಾಲಿತ್ತು. ಆಗ ಹುಡುಗನೊಬ್ಬ ಆಕೆಯನ್ನು ಅಲ್ಲಾಡಿಸಿ, ಆಕೆಯ ತಲೆಯನ್ನು ಮತ್ತೆ ಮುಂದಕ್ಕೆ ತಂದಿದ್ದ. ಆಗ ಸ್ವಲ್ಪ ಚೇತರಿಸಿಕೊಂಡು ಮತ್ತೆ ಕುಳಿತುಕೊಳ್ಳಲು ಬಾಲಕಿ ಪ್ರಯತ್ನಿಸುತ್ತಾಳೆ. ಸ್ವಲ್ಪ ಸಮಯದವರೆಗೆ ಆಕೆ ಸರಿಯಾಗಿಯೇ ಇದ್ದಂತೆ ತೋರುತ್ತದೆ. ನಂತರ ಆಕೆ ತನ್ನ ತಲೆಯನ್ನು ಮೇಜಿನ ಮೇಲೆ ಇರಿಸಿ, ಸ್ವಲ್ಪ ಮೇಲಕ್ಕೆತ್ತುತ್ತಾಳೆ. ಆಗ ಇದ್ದಕ್ಕಿದ್ದಂತೆ ದೇಹದ ಮೇಲಿನ ನಿಯಂತ್ರಣ ತಪ್ಪಿ, ಕುರ್ಚಿಯಿಂದ ಕೆಳಗೆ ಜಾರಿ ಬಿದ್ದಿದ್ದಾಳೆ.

ಶಾಲೆಯ ಆಡಳಿತಾಧಿಕಾರಿ ಆಶಿಶ್ ಉಪಾಧ್ಯಾಯ ಅವರು ಪ್ರತಿಕ್ರಿಯಿಸಿ, ಘಟನೆ ಪೂರ್ತಿ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೆರವಣಿಗೆಯ ಸಮಯದಲ್ಲಿ ಡಿಜೆಯ ಶಬ್ಧವನ್ನು ಹೆಚ್ಚಿನ ಪ್ರಮಾಣದಲ್ಲಿ ಇರಿಸಿದ್ದರಿಂದಲೇ ಈ ದುರಂತ ಘಟನೆ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಶಿಕ್ಷಕಿ ಇಕ್ರಾ ಖಾನ್ ಮಾತನಾಡಿ, ನಾನು ಪಾಠ ಮಾಡುತ್ತಿದ್ದಾಗ ಮೆರವಣಿಗೆ ಅಲ್ಲಿಗೆ ಬಂತು. ಆಗ ಡಿಜೆ ಶಬ್ದವು ಹೆಚ್ಚಿನ ಪ್ರಮಾಣದಲ್ಲಿತ್ತು. ತರಗತಿಯ ಕೊಠಡಿ ಕಂಪಿಸಲು ಪ್ರಾರಂಭಿಸಿತು. ಆಗಲೇ ಆ ವಿದ್ಯಾರ್ಥಿನಿಗೆ ಮೊದಲ ಬಾರಿಗೆ ಹೃದಯಾಘಾತವಾಯಿತು. ಇದನ್ನು ಗಮನಿಸಿದ ಕೂಡಲೇ ಇತರ ಶಿಕ್ಷಕರು ಅಲ್ಲಿಗೆ ಬಂದರು ಮತ್ತು ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದಿದ್ದಾರೆ.

ವಿದ್ಯಾರ್ಥಿನಿಯ ಸಾವಿಗೆ ಡಿಜೆ (DJ) ಶಬ್ದ ಕಾರಣವೋ ಅಥವಾ ಅದರ ಹಿಂದೆ ಬೇರೆ ಯಾವುದಾದರೂ ವೈದ್ಯಕೀಯ ಕಾರಣವಿದೆಯೋ ಎಂಬುದು ತನಿಖಾ ವರದಿಯ ನಂತರವಷ್ಟೇ ಸಂಪೂರ್ಣವಾಗಿ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ

Spread the loveಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿನಡೆದಿದೆ. ಜಯಶೀಲಾ.ಬಿ.ಕೆ (ಪ್ರಿಯಾಂಕ 24) ಅನುಮಾನಾಸ್ಪದವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ