ಮೈಸೂರು: ಮುಂದಿನ ವರ್ಷ ಮೂರು ದಿನಗಳ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಜೆಎಸ್ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಸಪ್ನಬುಕ್ ಹೌಸ್, ಜೆಎಸ್ಎಸ್ ಮಹಾವಿದ್ಯಾಪೀಠ ಮತ್ತು ವಿದ್ಯಾವಿಕಾಸ ಎಜುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರ ‘ವಿಶ್ವಸಂಸ್ಕೃತಿಯ ಮಹಾಯಾನ’ (ಸಂಪುಟ 4)– ಗದ್ಯ ಮಹಾಕಾವ್ಯ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ 2027ರಲ್ಲಿ ಮೂರು ದಿನಗಳ ಕಾಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಈ ಕುರಿತು ಮುಂದಿನ ಬಜೆಟ್ನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿದೇಶಗಳಲ್ಲಿಯೂ ಕನ್ನಡಕ್ಕೆ ಅಪಾರ ಗೌರವ ನೀಡುತ್ತಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಜಗತ್ತು ಒಂದಾಗಬೇಕಾದರೆ ಮೊದಲು ಮನುಷ್ಯರು ಒಂದಾಗಬೇಕು. ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವುದೇ ಧರ್ಮ ಮತ್ತು ಸಂಸ್ಕೃತಿ. ರಾಜಕೀಯದಲ್ಲಿರುವ ನಮ್ಮ ಹೆಸರುಗಳು ಭವಿಷ್ಯದಲ್ಲಿ ಮರೆಯಾಗಬಹುದು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರು ಮತ್ತು ಅವರ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಶಿಕ್ಷಣ ಮತ್ತು ಸಾಹಿತ್ಯ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ ಎಂದು ಹೇಳಿದರು.
ಸಾಹಿತ್ಯ ಮತ್ತು ರಾಜಕಾರಣದ ನಂಟು ಹೊಸದೇನಲ್ಲ. ಅಧಿಕಾರವನ್ನು ಬಳಸಿಕೊಂಡು ಜನರ ಬದುಕಿನಲ್ಲಿ ಬದಲಾವಣೆ ತರಬಹುದು. ಆದರೆ ಸಾಹಿತ್ಯದ ಮೂಲಕ ಜನರ ಆಲೋಚನೆಗಳನ್ನೇ ಬದಲಾಯಿಸಬಹುದು. ಅಧಿಕಾರದ ಅವಧಿ ಸೀಮಿತವಾದರೂ ಸಾಹಿತ್ಯದ ಪ್ರಭಾವ ಶಾಶ್ವತ. ಒಬ್ಬ ವ್ಯಕ್ತಿಯ ಬದುಕು ಮುಗಿದರೂ ಆತ ಬರೆದ ಚಿಂತನೆಗಳಿಗೆ ಸಾವಿಲ್ಲ. ವೀರಪ್ಪ ಮೊಯಿಲಿ ಅವರ ಸಾಹಿತ್ಯಿಕ ಹಾಗೂ ರಾಜಕೀಯ ಕೊಡುಗೆಗಳು ಅಪಾರ. 1985ರಲ್ಲಿ ತಮಗೆ, ಎಚ್.ಎಂ. ರೇವಣ್ಣ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಯುವ ನಾಯಕರಿಗೆ ರಾಜೀವ್ ಗಾಂಧಿ ಅವರೊಂದಿಗೆ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕಿಸಿಕೊಡುವಲ್ಲಿ ವೀರಪ್ಪ ಮೊಯಿಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ಜೀವನದಲ್ಲಿ ಹಲವು ಯುವ ನಾಯಕರಿಗೆ ಅವಕಾಶ ಕಲ್ಪಿಸಿದ ಅವರು, ಇದು ಸಾಹಿತ್ಯ ಲೋಕದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದು ಹೊಗಳಿದರು.
ವೀರಪ್ಪ ಮೊಯಿಲಿ ಅವರು ನಾಲ್ಕನೇ ತರಗತಿಯಲ್ಲಿದ್ದಾಗಲೇ ಕವಿತೆ ಬರೆಯುವ ಮೂಲಕ ಸಾಹಿತ್ಯದ ಒಲವು ಬೆಳೆಸಿಕೊಂಡವರು. ರಾಜಕೀಯ ಮತ್ತು ಸಾಹಿತ್ಯ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಅವರ ಸಾಧನೆ ವಿಶೇಷವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ರಾಜಕೀಯದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು.
ಮೊಯಿಲಿ ಅವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅವರ ‘ರಾಮಾಯಣ ಮಹಾನ್ವೇಷಣಂ’ ಕೃತಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದೆ. ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕುರಿತಂತೆ ಅವರು ಬರೆದಿರುವ ಭಾಗವನ್ನು ಪ್ರತ್ಯೇಕ ಪುಸ್ತಕವಾಗಿ ಪ್ರಕಟಿಸುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಜ್ಞಾನಪೀಠ ಸೇರಿದಂತೆ ಇನ್ನಷ್ಟು ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳು ಲಭಿಸಲಿ ಎಂದು ಸಿಎಂ ಹಾರೈಸಿದರು.
ರಾಜಕಾರಣಿಗಳಿಗೆ ಸಾರ್ವಜನಿಕ ಕೆಲಸಗಳ ಒತ್ತಡದ ನಡುವೆ ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಸಮಯ ಮೀಸಲಿಡುವುದು ಸುಲಭವಲ್ಲ. ಆದರೆ ಮೊಯಿಲಿ ಅವರು ರಾಜಕೀಯ ಜೀವನದ ನಡುವೆಯೂ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ. ರಾಜಕಾರಣಿಗಳಾದ ಎಂ.ಪಿ. ಪ್ರಕಾಶ್, ಬಂಗಾರಪ್ಪ, ಎಸ್ ಎಂ ಕೃಷ್ಣ ಸೇರಿದಂತೆ ಅನೇಕ ಹಿರಿಯ ನಾಯಕರು ಕೂಡ ಸಾಹಿತ್ಯ ಪ್ರೇಮಿಗಳಾಗಿದ್ದರು. ಕತ್ತಿಗಿಂತ ಲೇಖನಿ ಹರಿತ ಎಂಬ ಮಾತಿನಂತೆ ಸಾಹಿತ್ಯಕ್ಕೆ ಸಮಾಜವನ್ನು ಬದಲಿಸುವ ಶಕ್ತಿಯಿದೆ. ಸುತ್ತೂರು ಶ್ರೀಗಳು ನೂರಾರು ಬರಹಗಾರರನ್ನು ಪ್ರೋತ್ಸಾಹಿಸಿ, ಅನೇಕ ಪುಸ್ತಕಗಳ ರಚನೆಗೆ ಪ್ರೇರಣೆ ನೀಡಿದ್ದಾರೆ. ಸಾಹಿತ್ಯ, ಆಧ್ಯಾತ್ಮಿಕ ಚಿಂತನೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಹಿರಿಯರು ನೀಡುತ್ತಿರುವ ಕೊಡುಗೆ ಅಪಾರ ಎಂದು ತಿಳಿಸಿದರು.
Laxmi News 24×7