Breaking News

ಅಸಲಿ ಹಣದ ಬದಲಿಗೆ ಮಕ್ಕಳ ಆಟಿಕೆ ನೋಟುಗಳನ್ನಿಟ್ಟು ಮೋಸಕ್ಕೆ ಸ್ಕೆಚ್ – ಡೀಲ್ ವೇಳೆ ಸಿಸಿಬಿ ದಾಳಿ

Spread the love

ಬೆಳಗಾವಿ: ಐದು ಕೋಟಿ ರೂಪಾಯಿ ಬ್ಲ್ಯಾಕ್ ಮನಿ ನೀಡಿದರೆ ಮೂರು ಕೋಟಿ ರೂಪಾಯಿ ವೈಟ್ ಮನಿ ನೀಡುವುದಾಗಿ ಆಮಿಷವೊಡ್ಡಿ ಕೋಟಿ ಕೋಟಿ ರೂಪಾಯಿಗಳ ವ್ಯವಹಾರದ ಹೆಸರಿನಲ್ಲಿ ಪರಸ್ಪರ ವಂಚನೆಗೆ ಮುಂದಾಗಿದ್ದ ಖದೀಮರ ಜಾಲವನ್ನು ಬೆಳಗಾವಿ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಅಸಲಿ ಹಣದ ಬದಲಿಗೆ ಮಕ್ಕಳ ಆಟಿಕೆ ನೋಟುಗಳನ್ನು ನೀಡಿ ವಂಚಿಸಲು ಒಂದು ತಂಡ ಸ್ಕೆಚ್ ಹಾಕಿದ್ದರೆ, ಮತ್ತೊಂದು ಕಡೆ ಐದು ಕೋಟಿ ರೂಪಾಯಿ ಆರ್‌ಟಿಜಿಎಸ್ ಮಾಡಿದ್ದೇವೆಂದು ನಕಲಿ ಬ್ಯಾಂಕ್ ಮೆಸೇಜ್ ಕಳುಹಿಸಿ ಮೋಸ ಮಾಡಲು ಸಂಚು ರೂಪಿಸಲಾಗಿತ್ತು.

ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ ನಗರದಲ್ಲಿ ಈ ಘಟನೆ ನಡೆದಿದ್ದು, ಸಿಸಿಬಿ ಸಬ್ ಇನ್‌ಸ್ಪೆಕ್ಟರ್‌ ಮಂಜುನಾಥ ಭಜಂತ್ರಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಎರಡೂ ಕಡೆಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

5 ಕೋಟಿ ಬ್ಲ್ಯಾಕ್ ಮನಿಗೆ 3 ಕೋಟಿ ವೈಟ್ ಮನಿ ಆಮಿಷ
ಆರೋಪಿಗಳು ಐದು ಕೋಟಿ ರೂಪಾಯಿ ಬ್ಲ್ಯಾಕ್ ಮನಿ ನೀಡಿದರೆ ಪ್ರತಿಯಾಗಿ ಮೂರು ಕೋಟಿ ರೂಪಾಯಿ ವೈಟ್ ಮನಿ ನೀಡುವುದಾಗಿ ಪರಸ್ಪರ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆನ್‌ಲೈನ್ ಮೂಲಕ ಐದು ಕೋಟಿ ರೂಪಾಯಿ ವರ್ಗಾವಣೆ ಮಾಡುವುದಾಗಿ ಹೇಳಿ, ಅದಕ್ಕೆ ಪ್ರತಿಯಾಗಿ ಮೂರು ಕೋಟಿ ರೂಪಾಯಿ ಬಿಳಿ ಹಣ ನೀಡುವ ಒಪ್ಪಂದದ ರೀತಿಯಲ್ಲಿ ವ್ಯವಹಾರ ಕುದುರಿಸಲು ಮುಂದಾಗಿದ್ದರು.

ಆದರೆ, ಈ ಕೋಟಿ ಕೋಟಿ ವ್ಯವಹಾರದ ಹಿಂದೆ ಎರಡೂ ಕಡೆಯವರಿಂದಲೂ ವಂಚನೆಯ ಸಂಚು ನಡೆದಿತ್ತು. ಒಂದು ಕಡೆ ಅಸಲಿ ಹಣ ನೀಡುವ ಬದಲಿಗೆ ಮಕ್ಕಳ ಆಟಿಕೆ ನೋಟುಗಳನ್ನು ಬಳಸಿ ಮೋಸ ಮಾಡಲು ಯೋಜನೆ ರೂಪಿಸಲಾಗಿತ್ತು.

ಮಕ್ಕಳ ಆಟಿಕೆ ನೋಟುಗಳ ಮೇಲೆ 500 ರೂಪಾಯಿ ನೋಟುಗಳ ವೀಡಿಯೊ
ಐದು ಕೋಟಿ ರೂಪಾಯಿ ನಗದು ಇದೆ ಎಂಬಂತೆ ತೋರಿಸಲು ಮಕ್ಕಳ ಆಟಿಕೆ ನೋಟುಗಳನ್ನು ಸಂಗ್ರಹಿಸಿ, ಅವುಗಳ ಮೇಲ್ಭಾಗದಲ್ಲಿ ಅಸಲಿ 500 ರೂಪಾಯಿ ನೋಟುಗಳನ್ನು ಇಟ್ಟು ವೀಡಿಯೊ ಮಾಡಲಾಗಿತ್ತು. ಈ ಮೂಲಕ ದೊಡ್ಡ ಮೊತ್ತದ ಅಸಲಿ ಹಣವಿದೆ ಎಂಬ ನಂಬಿಕೆ ಮೂಡಿಸಿ ಎದುರಿನವರನ್ನು ವಂಚಿಸಲು ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.

ಇನ್ನೊಂದೆಡೆ, ಶಿವಾನಂದ ಮುನವಳ್ಳಿ ಎಂಬಾತ ಐದು ಕೋಟಿ ರೂಪಾಯಿ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಲಾಗಿದೆ ಎಂಬಂತೆ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಸುಳ್ಳು ಮೆಸೇಜ್ ಕಳುಹಿಸಿ ಎದುರಿನವರನ್ನು ನಂಬಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಹೀಗೆ ಒಂದು ಕಡೆಯವರು ಆಟಿಕೆ ನೋಟುಗಳನ್ನು ಬಳಸಿ ಮೋಸ ಮಾಡಲು ಮುಂದಾಗಿದ್ದರೆ, ಮತ್ತೊಂದು ಕಡೆಯವರು ನಕಲಿ ಬ್ಯಾಂಕ್ ವ್ಯವಹಾರದ ದಾಖಲೆಗಳನ್ನು ಸೃಷ್ಟಿಸಿ ವಂಚಿಸಲು ಯತ್ನಿಸಿದ್ದರು.

ವಂಚನೆಗೆ ಸ್ಕೆಚ್ ಹಾಕುವಾಗಲೇ ಸಿಸಿಬಿ ದಾಳಿ
ಅಶೋಕ ನಗರದಲ್ಲಿ ನಕಲಿ ಆಟಿಕೆ ಹಣವನ್ನು ಸಂಗ್ರಹಿಸಿಟ್ಟುಕೊಂಡು ವ್ಯವಹಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆಯವರ ವಂಚನೆಯ ಪ್ರಯತ್ನ ಬೆಳಕಿಗೆ ಬಂದಿದ್ದು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಬಂಧಿತರನ್ನು ಶಿವಲಿಂಗಯ್ಯ ಗಣಾಚಾರಿ (28), ಸಾಗರ ಕಿಳ್ಳಿಕೇತ್ (32), ಅಂಕಲಿಯ ವಿನಾಯಕ ನೋಕರೆ (27) ಹಾಗೂ ಶಿವಾನಂದ ಮುನವಳ್ಳಿ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಮಕ್ಕಳ ಆಟಿಕೆ ನೋಟುಗಳು, ಏರ್‌ಗನ್ ಸೇರಿದಂತೆ ಅಂದಾಜು 35 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕೋಟಿ ಕೋಟಿ ರೂಪಾಯಿಗಳ ವ್ಯವಹಾರದ ಹೆಸರಿನಲ್ಲಿ ಪರಸ್ಪರರನ್ನೇ ವಂಚಿಸಲು ಮುಂದಾಗಿದ್ದ ನಾಲ್ವರು ಆರೋಪಿಗಳು ಕೊನೆಗೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕಾರ್ಯಾಚರಣೆ ಸಿಸಿಬಿ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ ಭಜಂತ್ರಿ ನೇತೃತ್ವದಲ್ಲಿ ನಡೆದಿದ್ದು, ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆಯ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ

Spread the loveಮೈಸೂರು: ಮುಂದಿನ ವರ್ಷ ಮೂರು ದಿನಗಳ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ