Breaking News

ನಮ್ಮ ಮೆಟ್ರೋ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಕೇಂದ್ರದ ವಿರುದ್ಧ ಸಿಎಂ, ಕೃಷ್ಣ ಬೈರೇಗೌಡ ಕಿಡಿ

Spread the love

ಬೆಂಗಳೂರು: ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಈ ಹಿಂದೆ ಆರೋಪಿಸಿದ್ದ ರಾಜ್ಯ ಸರ್ಕಾರ, ಇದೀಗ ನಮ್ಮ ಮೆಟ್ರೋ ಯೋಜನೆಯ ಅನುದಾನದ ವಿಚಾರದಲ್ಲೂ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಮೆಟ್ರೋ ಯೋಜನೆಯಲ್ಲಿ 50:50 ಪಾಲುದಾರಿಕೆ ಇದ್ದರೂ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಸಿಎಂ ಡಿಕೆ ಶಿವಕುಮಾರ್‌, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ಮತ್ತೊಂದೆಡೆ, ಈ ಆರೋಪಗಳನ್ನು ತಳ್ಳಿಹಾಕಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಸಿಎಂ ಹೇಳಿದ್ದೇನು?
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, “ನಮ್ಮ ಮೆಟ್ರೋ ನಿರ್ಮಾಣದಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ ಶೇ.16ರಷ್ಟು ಮಾತ್ರ ಇದ್ದರೆ, ರಾಜ್ಯ ಸರ್ಕಾರ ಶೇ. 84ರಷ್ಟು ವೆಚ್ಚವನ್ನು ಭರಿಸುತ್ತಿದೆ” ಎಂದು ತಿಳಿಸಿದ್ದಾರೆ. ಅನುದಾನದ ಜೊತೆಗೆ ಭೂಸ್ವಾಧೀನ, ಪುನರ್ವಸತಿ, ರಾಜ್ಯ ತೆರಿಗೆ, ನಿರ್ಮಾಣ ಅವಧಿಯ ಬಡ್ಡಿ, ಸಾಲ ಮರುಪಾವತಿ ಹಾಗೂ ಮೆಟ್ರೋ ರೈಲುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರವೇ ನಿಭಾಯಿಸುತ್ತಿದೆ. ಕಾಮಗಾರಿಗಳ ವಿಳಂಬದಿಂದ ಉಂಟಾಗುವ ಹೆಚ್ಚುವರಿ ವೆಚ್ಚದ ಹೊರೆಯಲ್ಲೂ ರಾಜ್ಯದ ಪಾಲು ಗಣನೀಯವಾಗಿದೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕೃಷ್ಣ ಬೈರೇಗೌಡ ಹೇಳಿದ್ದೇನು?
ಮೆಟ್ರೋ ಅನುದಾನ ತಾರತಮ್ಯದ ಬಗ್ಗೆ ಧ್ವನಿ ಎತ್ತಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ನವೆಂಬರ್ 13ರಂದು ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದಾಗ ಈ ಕುರಿತು ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. “22 ತಿಂಗಳ ಹಿಂದೆಯೇ ರೆಡ್ ಲೈನ್ ಮೆಟ್ರೋಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ” ಎಂದು ಅವರು ದೂರಿದ್ದಾರೆ.

ಬೆಂಗಳೂರಿನಿಂದ ಕೇಂದ್ರ ಸರ್ಕಾರಕ್ಕೆ ಅಪಾರ ಪ್ರಮಾಣದ ತೆರಿಗೆ ಹರಿದುಹೋಗುತ್ತಿದೆ. ಹೀಗಾಗಿ ಕೇಂದ್ರವು ಬೆಂಗಳೂರು ಮೆಟ್ರೋಗೆ ಹೆಚ್ಚಿನ ಅನುದಾನ ನೀಡಬೇಕು. ಯೋಜನೆಗೆ ತಗಲುವ ಸಾಲ ಮರುಪಾವತಿ ಹೊರೆ ಹೆಚ್ಚಾಗುತ್ತಿದ್ದು, ರೂಪಾಯಿ ಮೌಲ್ಯ ಕುಸಿದಾಗ ಆರ್ಥಿಕ ಹೊರೆ ಮತ್ತಷ್ಟು ಏರಿಕೆಯಾಗುತ್ತಿದೆ. ಇದರ ಜೊತೆಗೆ ಮೆಟ್ರೋದ 1,466 ಕೋಟಿ ರೂ. ನಷ್ಟವನ್ನೂ ರಾಜ್ಯವೇ ಭರಿಸುತ್ತಿದೆ. ಯೋಜನಾ ವೆಚ್ಚ ಹೆಚ್ಚಾದರೆ ಅದನ್ನು ರಾಜ್ಯ ಸರ್ಕಾರವೇ ಭರಿಸಬೇಕಾದ ಪರಿಸ್ಥಿತಿ ಇದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದ್ದಾರೆ.

ರಾಜ್ಯದ ವಾದ ಏನು?
ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ, ಮೆಟ್ರೋ ಹಂತ-1 (ನೇರಳೆ ಮತ್ತು ಹಸಿರು ಮಾರ್ಗ), ಹಂತ-2 (ವಿಸ್ತರಿತ ಯೋಜನೆ + ಪಿಂಕ್ ಮಾರ್ಗ), ಹಂತ-2ಎ (ಸಿಲ್ಕ್ ಬೋರ್ಡ್-ಬೈಯಪ್ಪನಹಳ್ಳಿ ಬ್ಲೂ ಲೈನ್), ಹಂತ-2ಬಿ (ಬೈಯಪ್ಪನಹಳ್ಳಿ-ಏರ್‌ಪೋರ್ಟ್ ಬ್ಲೂ ಲೈನ್) ಹಾಗೂ ಹಂತ-3 (ಜೆ.ಪಿ. ನಗರ-ಕೆಂಪಾಪುರ) ಸೇರಿದಂತೆ ಇದುವರೆಗೆ ಒಟ್ಟು 77,891 ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು 65,291 ಕೋಟಿ ರೂ. (ಶೇ. 83.8) ಆಗಿದ್ದರೆ, ಕೇಂದ್ರ ಸರ್ಕಾರ 12,600 ಕೋಟಿ ರೂ. (ಶೇ. 16.2) ಅನುದಾನ ನೀಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ತೇಜಸ್ವಿ ಸೂರ್ಯ ತಿರುಗೇಟು:
ರಾಜ್ಯ ಸರ್ಕಾರದ ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, “ರಾಜ್ಯ ಸರ್ಕಾರವು ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ” ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ. ಅಲ್ಲದೆ, ಈ ಕುರಿತ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ನಾಳೆ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ

Spread the loveಮೈಸೂರು: ಮುಂದಿನ ವರ್ಷ ಮೂರು ದಿನಗಳ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ