Breaking News
Home / ರಾಜಕೀಯ / ರಂಗೇರಿದ ಉಪ ಚುನಾವಣೆ ಪ್ರಚಾರ: ಹಾನಗಲ್‌ನಲ್ಲಿ ಡಿಕೆ ಶಿವಕುಮಾರ್ ಭರ್ಜರಿ ಮತಬೇಟೆ

ರಂಗೇರಿದ ಉಪ ಚುನಾವಣೆ ಪ್ರಚಾರ: ಹಾನಗಲ್‌ನಲ್ಲಿ ಡಿಕೆ ಶಿವಕುಮಾರ್ ಭರ್ಜರಿ ಮತಬೇಟೆ

Spread the love

ಹಾವೇರಿ, ಅಕ್ಟೋಬರ್ 22: ದಿನ ಕಳೆದಂತೆ ರಾಜ್ಯದಲ್ಲಿ ಉಪಚುನಾವಣೆಯ ಪ್ರಚಾರ ಭರದಿಂದ ಸಾಗಿದೆ. ಈ ಬಾರಿ ಗೆಲ್ಲಲ್ಲೇಬೇಕು ಎನ್ನುವ ದೃಢನಿರ್ಧಾರದೊಂದಿಗೆ ಮೂರು ಪಕ್ಷಗಳು ತೊಡೆತಟ್ಟಿ ಚುನಾವಣಾ ಕಣಕ್ಕಿಳಿದಿವೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾನಗಲ್‌ನ ನರೇಗಲ್‌ನಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಗಳ ಬಗ್ಗೆ ಪ್ರಶ್ನೆ ಮಾಡಿದ ಬಿಜೆಪಿಗೆ ”ಕನಕಪುರದ ಬಂಡೆ” ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ನರೇಗಲ್‌ನಲ್ಲಿ ಪ್ರಚಾರದ ಭಾಗವಾಗಿ ಮಾತನಾಡಿದ ಡಿಕೆ ಶಿವಕುಮಾರ್,”ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಅವರು ಏನು ಮಾಡಿದ್ದಾರೆ. ಬಿಜೆಪಿ ಸರ್ಕಾರ ಏನು ಕೊಡುಗೆ ನೀಡಿದೆ ಎಂಬುದನ್ನು ಜನರ ಮುಂದಿಡಿ. ನಾವು ಸವಾಲು ಎದುರಿಸಲು ಸಿದ್ದರಿದ್ದೇವೆ ಎಂದು ಡಿಕೆ ಶಿವಕುಮಾರ್ ಹರಿಹಾಯ್ದಿದ್ದಾರೆ. ಈ ಚುನಾವಣೆಯನ್ನು ನಾವು ನಮ್ಮ ಪಕ್ಷದ ನೀತಿ ಹಾಗೂ ಕಾರ್ಯಕ್ರಮಗಳ ಆಧಾರದ ಮೇಲೆ ಎದುರಿಸುತ್ತಿದ್ದೇವೆ. ಜನರಿಗೆ ಯಾರು ಸಹಾಯ ಮಾಡಿದ್ದಾರೆ ಎಂಬುದು ಇಲ್ಲಿ ಚರ್ಚೆ ಆಗಬೇಕಾದ ಮುಖ್ಯ ಅಂಶ. ನಮ್ಮ ಮನೋಹರ್ ತಹಶೀಲ್ದಾರ್ ಅವರು ಶಾಸಕರಾಗಿದ್ದಾಗ ಈ ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳಿಗೆ 2.30 ಕೋಟಿ ರು. ಖರ್ಚು ಮಾಡಿರುವ ಪಟ್ಟಿ ಇದೆ. ಆದರೆ ಬಿಜೆಪಿ ಕೊಡುಗೆ ಏನು ಅನ್ನೋದನ್ನ ಜನರ ಮುಂದಿಡಲಿ ಎಂದಿದ್ದಾರೆ.

ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದಿದ್ದರು

ಈ ಹಿಂದೆ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದಿದ್ದರು. ಹೀಗಾಗಿ ನೀವೆಲ್ಲ ಮತ ನೀಡಿದ್ದೀರಿ. ಅವರು ಗೆದ್ದು ರಾಜ್ಯದಲ್ಲಿ ಮಾತ್ರವಲ್ಲದೇ ಕೇಂದ್ರದಲ್ಲೂ ಆಡಳಿತದ ನಡೆಸುತ್ತಿದ್ದಾರೆ. ಕೊಟ್ಟ ಮಾತಿನಂತೆ ಬಿಜೆಪಿ ನಿಮ್ಮ ಆದಾಯವನ್ನು ಡಬಲ್ ಮಾಡಿದಿಯಾ? ನಿಮ್ಮ ಜಿಲ್ಲೆಯವರೇ ಕೃಷಿ ಸಚಿವರು. ನಿಮ್ಮ ಬೆಳೆಗೆ ನೀಡುವ ಬೆಲೆ ಡಬಲ್ ಆಗಿದಿಯಾ? ಗೊಬ್ಬರ ಬೆಲೆ ಕಡಿಮೆ ಆಗಿದೆಯಾ? ನರೇಗಾ ಕೂಲಿ ಹೆಚ್ಚಾಗಿದೆಯಾ? ಯಾವುದೂ ಹೆಚ್ಚಾಗಿಲ್ಲ ಎಂದು ಡಿಕೆಶಿ ಹೇಳಿದರು.

ಕಾಂಗ್ರೆಸ್ ಅಕ್ಕಿಯಿಂದ ಜನರ ಊಟ ಬಿಜೆಪಿಯ ಸಿಲಿಂಡರ್‌ನಿಂದಲ್ಲ

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಬಗ್ಗೆ ಗುಡುಗಿದ ಡಿಕೆ ಶಿವಕುಮಾರ್ ರಾಜ್ಯದಲ್ಲಿ ಜನ ಕಾಂಗ್ರೆಸ್ ಕೊಟ್ಟ ಅಕ್ಕಿಯಿಂದ ಊಟ ಮಾಡುತ್ತಿದ್ದಾರೆ ವಿನ: ಬಿಜೆಪಿ ಕೊಟ್ಟಿರುವ ಸಿಲಿಂಡರ್‌ನಿಂದಲ್ಲ ಎಂದು ಜನರೇ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದಾರೆ ಎಂದರು. ನಾವು ಕಾಂಗ್ರೆಸ್ ಕೊಟ್ಟ ಅಕ್ಕಿಯನ್ನು ನಿತ್ಯ ಊಟ ಮಾಡುತ್ತಿದ್ದು, ನಾವು ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಸಿಲಿಂಡರ್ ಬೆಲೆ ಏರಿಕೆಯಾಗುತ್ತಲೇ ಇದ್ದು ಇದನ್ನು ಪ್ರಚಾರದ ಅಸ್ತ್ರವಾಗಿ ಡಿಕೆ ಶಿವಕುಮಾರ್ ಬಳಸಿದರು.

ಅಚ್ಛೇ ದಿನ್ ಬದಲಿಗೆ ಕಚ್ಚಾ ದಿನ್

 

ಈ ಹಿಂದೆ ಮೋದಿ ಅವರು ಜನರನ್ನು ವಿಶ್ವಾಸಕ್ಕೆ ಪಡೆಯಲು ಒಳ್ಳೆ ದಿನ ಬರುತ್ತದೆ ಎಂದು ಹೇಳಿದ್ದರು. ಈ ಮಾತನ್ನು ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, ಬಿಜೆಪಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಡೀಸೆಲ್ ಬೆಲೆಯನ್ನು 50 ರೂ. ಒಳಗೆ ಇಡುತ್ತೇವೆ ಎಂದಿದ್ದರು. 2013 ರಲ್ಲಿ 50 ರು. ಇದ್ದ ಪೆಟ್ರೋಲ್ ಈಗ 110 ರು. ಆಗಿದೆ. ಇದು ಅಚ್ಛೇ ದಿನನಾ? 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್ 410 ರು. ಇತ್ತು. ಈಗ ಅದು 980 ರು. ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ರು. ಇತ್ತು. ಈಗ 200 ರು. ಆಗಿದೆ. ಮೋದಿ ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಇದು ಈ ಚುನಾವಣೆಯ ಪ್ರಶ್ನೆಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ನಿರುದ್ಯೋಗ ಹೆಚ್ಚಳ

ಜನರಿಗೆ ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದೊಂದಿಗೆ ನಿರುದ್ಯೋಗದ ಸಮಸ್ಯೆಯೂ ಹೆಚ್ಚಾಗಿದೆ. ಜನರ ಖಾತೆಗೆ ಹಣ ಹಾಕಿತ್ತೇನೆ ಎಂದಿದ್ದ ಬಿಜೆಪಿ ಯಾರ ಖಾತೆಗಾದರೂ 15 ಲಕ್ಷ ರು. ಹಣ ಹಾಕಿದರಾ? ಕೋವಿಡ್ ಸಂದರ್ಭದಲ್ಲಿ 15 ಸಾವಿರ ಆದರೂ ಹಾಕಿದರಾ? ಎಂದು ಕೇಳಿದ್ದಾರೆ. ಕೊರೊನಾದಿಂದಾಗಿ ದುಡಿಯಲು ಹೋದವರು ಬರಿಗೈಲಿ ಹಳ್ಳಿಗಳಿಗೆ ಮರಳಿದ್ದಾರೆ. ಕೆಲವರು ಸಿದ್ದರಾಮಯ್ಯ ಕೃಪೆಯಿಂದ ಉಚಿತ ವ್ಯವಸ್ಥೆ ಮಾಡಿದಾಗ ತಮ್ಮೂರಿಗೆ ಮರಳಿದವರು ಇದ್ದಾರೆ. ಇಂತಹ ಒಂದು ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆಯಾ? ಜನರೇ ನಮ್ಮ ಅಭ್ಯರ್ಥಿಯನ್ನು ಆಪದ್ಭಾಂದವ ಎಂದು ಹೊಗಳುತ್ತಿದ್ದಾರೆ. ಯಾಕೆಂದರೆ, ಕೋವಿಡ್ ಸಮಯದಲ್ಲಿ ವೃತ್ತಿ ಕಳೆದುಕೊಂಡವರಿಗೆ ಶ್ರೀನಿವಾಸ ಮಾನೆ ಅವರು ತಲಾ 2 ಸಾವಿರ ರು. ಚೆಕ್ ನೀಡಿದ್ದಾರೆ. ಸರ್ಕಾರ ಮಾಡಲು ಸಾಧ್ಯವಾಗದ ಕೆಲಸವನ್ನು ನಮ್ಮ ಅಭ್ಯರ್ಥಿ ಮಾಡಿ ತೋರಿಸಿದ್ದಾರೆ. ಜನರ ಕಷ್ಟಕ್ಕೆ ಇವರು ಆಗುತ್ತಾರೆ. ಇವರು ಇಲ್ಲೇ ಇದ್ದು, ಜನರ ಸೇವೆ ಮಾಡುತ್ತಾರೆ ಎಂಬ ನಂಬಿಕೆಯಿಂದ ಜನ ಪಕ್ಷಬೇಧ ಮರೆತು ಬೆಂಬಲ ನೀಡುತ್ತಿದ್ದಾರೆ ಎಂದರು. ನಿಮ್ಮ ಕಷ್ಟಕಾಲದಲ್ಲಿ ನೆರವಾದವರಿಗೆ ಮತ ಹಾಕುವ ಭರವಸೆ ವಿಶ್ವಾಸ ನನಗಿದೆ ಎಂದರು.


Spread the love

About Laxminews 24x7

Check Also

ಕಾಂಗ್ರೆಸ್​ ತೊರೆದು ಶಿಂಧೆ ಬಣ ಸೇರ್ಪಡೆಯಾದ ಬಾಲಿವುಡ್​ ನಟ ಗೋವಿಂದ; ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Spread the loveಮುಂಬೈ: ಹಿರಿಯ ಬಾಲಿವುಡ್​ ನಟ, ಮಾಜಿ ಸಂಸದ ಗೋವಿಂದ ಗುರುವಾರ (ಮಾರ್ಚ್​ 28) ಕಾಂಗ್ರೆಸ್​ ತೊರೆದು ಶಿವಸೇನೆ (ಏಕನಾಥ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ