ಮೈಸೂರು: ದೆಹಲಿ ಗಡಿಯಲ್ಲಿ ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿಗಾಗಿ ಹೋರಾಡುತ್ತಿರುವ ಜಗಜಿತ್ ಸಿಂಗ್ ದಲೈವಾಲಾ ಅವರ 62 ದಿನದ ಉಪವಾಸ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಯಿತು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ಡಾ.ಸ್ವಾಮಿನಾಥನ್ ವರದಿ ಜಾರಿ, ರೈತರ ಸಂಪೂರ್ಣ ಸಾಲ ಮನ್ನಾ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ಧಲೈವಾಲಾ ಅವರು 62 ದಿನದ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ.
ಇದನ್ನು ಬೆಂಬಲಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಮೈಸೂರಿನಲ್ಲಿ ಬೆಂಬಲಿಸಲಾಯಿತು.ನಗರದ ಎಪಿಎಂಸಿ ವೃತ್ತದಿಂದ ಹೊರಟು ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಕಡಕೋಳ ಬಳಿ ಇರುವ ಟೋಲ್ ತನಕ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಟೋಲ್ ಬಂದ್ ಮಾಡಿ ಕೇಂದ್ರ ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದರು. ಸುಮಾರು 6 ಕಿ.ಮೀ ತನಕ ಎರಡು ಭಾಗದಲ್ಲೂ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.