ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿ ಹೋಳಿ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಕಾಮಣ್ಣ ಬಣ್ಣದಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಹಳೆ ಮೇದಾರ ಓಣಿ ಮತ್ತು ಹೊಸ ಮೇದಾರ ಓಣಿಯಲ್ಲಿ ಪ್ರತಿಷ್ಠಾಪಿಸಲಾಗುವ ಕಾಮಣ್ಣ ಹುಬ್ಬಳ್ಳಿಯ ಬೃಹತ್ ಕಾಮಣ್ಣ ಮೂರ್ತಿಗಳಾಗಿದ್ದು, 200 ವರ್ಷಗಳ ಇತಿಹಾಸವನ್ನು ಹೊಂದಿವೆ.
ಹಳೆ ಹುಬ್ಬಳ್ಳಿ ಮೇದಾರ ಓಣಿ ಹಾಗೂ ಹೊಸ ಹುಬ್ಬಳ್ಳಿ ಮೇದಾರ ಓಣಿಯಲ್ಲಿ ಹಲವಾರು ವರ್ಷಗಳಿಂದ ಬಿದಿರಿನಿಂದ ನಿರ್ಮಿಸಿದ ಸುಮಾರು 21 ಅಡಿ ಎತ್ತರದ ಎರಡು ಕಾಮಣ್ಣನ ಮೂರ್ತಿಗಳನ್ನು ಅಂದಾಜು 1ರಿಂದ 2 ಲಕ್ಷ ರೂ. ವೆಚ್ಚದಲ್ಲಿ ಸಿದ್ದಪಡಿಸಿ, ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಹೋಳಿ ಹುಣ್ಣಿಮೆ ಬರುವ ಒಂದು ತಿಂಗಳ ಪೂರ್ವದಲ್ಲಿಯೇ ಬಿದರಿನ ಕಾಮಣ್ಣನ ಮೂರ್ತಿ ಸಿದ್ದಪಡಿಸಿ, ಹುಣ್ಣಿಮೆ ದಿನ ಎರಡು ಕಡೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಶ್ರದ್ದಾ ಭಕ್ತಿಯಿಂದ ಮೇದಾರ ಸಮಾಜದ ಬಾಂಧವರು ಮಾತ್ರವಲ್ಲದೇ, ಸರ್ವ ಜನಾಂಗದವರು ಐದು ದಿನಗಳ ಕಾಲ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ. ತಮ್ಮ ಇಷ್ಟಾರ್ಥಗಳ ಪೂರೈಸಲು ಕಾಮಣ್ಣನಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ.
44 ವರ್ಷಗಳ ನಂತರದಲ್ಲಿ ಸಹೋದರರ ಸಮಾಗಮ ಕಳೆದ ವರ್ಷ ಆಗಿತ್ತು. ಈ ವರ್ಷವೂ ಸಮಾಗಮ ಮುಂದುವರಿಯಲಿದೆ. ಹೋಳಿ ಹಿನ್ನೆಲೆ ಬೃಹದಾಕಾರದ ಬಿದಿರಿನ ಕಾಮಣ್ಣನ ಮೂರ್ತಿಗಳು ಪರಸ್ಪರ ಎದುರು ಬದುರಾಗುವ ಸನ್ನಿವೇಶಕ್ಕೆ ವೇದಿಕೆ ಸಜ್ಜಾಗಿದೆ.
Laxmi News 24×7