Breaking News
Home / ಜಿಲ್ಲೆ / ಬೆಳಗಾವಿ| ಕೊರೊನಾ ಸೋಂಕು ಹಿನ್ನೆಲೆ: ಮಾಸಿದ ಹೋಳಿ ರಂಗು

ಬೆಳಗಾವಿ| ಕೊರೊನಾ ಸೋಂಕು ಹಿನ್ನೆಲೆ: ಮಾಸಿದ ಹೋಳಿ ರಂಗು

Spread the love

ಬೆಳಗಾವಿ: ಚೀನಾದಿಂದ ಹರಡುತ್ತಿರುವ ‘ಕೋವಿಡ್‌-19’ ಸೋಂಕಿನ ಭೀತಿ ಇಲ್ಲೂ ಆವರಿಸಿರುವುದರಿಂದಾಗಿ, ಈ ಬಾರಿಯ ಹೋಳಿ ಆಚರಣೆಯು ‘ರಂಗು’ ಕಳೆದುಕೊಂಡಿದೆ.

ಹೋಳಿ ಹಬ್ಬ ಈ ಭಾಗದ ಪ್ರಮುಖ ಆಚರಣೆಗಳಲ್ಲೊಂದು. ಈ ಬಾರಿ ಮಾರ್ಚ್‌ 9ರಂದು ಕಾಮದಹನ ಹಾಗೂ 10ರಂದು ಬಣ್ಣದಾಟ (ಓಕುಳಿ) ನಿಗದಿಯಾಗಿದೆ. ಆದರೆ, ಪ್ರಾಣಕ್ಕೆ ಮಾರಕವಾಗಬಲ್ಲ ಸೋಂಕಿನ ಭಯ ಹರಡಿರುವುದರಿಂದಾಗಿ ಹಬ್ಬ ಆಚರಿಸಲು ಬಹಳ ಜನರು ಮುಂದೆ ಬರುತ್ತಿಲ್ಲ.

ಮಾರುಕಟ್ಟೆಯಲ್ಲಿ ನಾನಾ ರೀತಿಯ ಪರಿಕರಗಳು ಬಂದಿವೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಬೇಡಿಕೆ ಕಂಡುಬಂದಿಲ್ಲ. ಪರಿಣಾಮ, ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಮಕ್ಕಳು ಹಾಗೂ ಯುವಜನರು ಬಳಸುವ ಪಿಚಕಾರಿಗಳಿಗೆ ತಲಾ ಸರಾಸರಿ ₹10ರಿಂದ ₹1,200, ವಿವಿಧ ರೀತಿಯ ಮುಖವಾಡಗಳ ಬೆಲೆ ₹40ರಿಂದ ₹300., ಬಣ್ಣ ಪಾಕೆಟ್‌ವೊಂದಕ್ಕೆ₹10ರಿಂದ ₹200ವರೆಗೆ ಇದೆ. ಇವುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿಲ್ಲ.
ಹಿಂಜರಿಯುತ್ತಿದ್ದಾರೆ

‘ಹೋಳಿಯಾಟಕ್ಕೆ ಬಹಳ ಜನರ ಹಿಂಜರಿಯುತ್ತಿರುವುದರಿಂದಾಗಿ, ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ’ ಎಂದು ವ್ಯಾಪಾರಿಗಳು ತಿಳಿಸಿದರು. ವಿಶೇಷವಾಗಿ ಚೀನಾ ಉತ್ಪನ್ನಗಳು, ಸಾಮಗ್ರಿಗಳಿಂದ ಜನರು ‘ದೂರ’ ಉಳಿಯುತ್ತಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲೂ ಪ್ರಚಾರ ನಡೆಯುತ್ತಿದೆ.

ಶಾಸಕ ಅಭಯ ಪಾಟೀಲ ಅವರು ಲೇಲೇ ಮೈದಾನದಲ್ಲಿ ಆಯೋಜಿಸುತ್ತಿದ್ದ ‘ಹೋಳಿ ಮಿಲನ’ ಕಾರ್ಯಕ್ರಮ ನಡೆಯುತ್ತಿಲ್ಲ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಿದ್ದರು. ನೃತ್ಯ, ಓಕುಳಿಯಾಟ ಮೇಳೈಸುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ರದ್ದುಪಡಿಸಲಾಗಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನೇತೃತ್ವದಲ್ಲಿ ಆಯೋಜಿಸುವ ‘ವುಮೇವಿಯಾ’ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆಯುತ್ತಿದೆ. ಅಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಮಾತ್ರ ಪ್ರವೇಶ ಇರುತ್ತದೆ.

ಪರೀಕ್ಷೆಯೂ ಇದೆ

ಸೋಂಕಿನ ಆತಂಕದಿಂದಾಗಿ, ಹೆಚ್ಚು ಜನರು ಸೇರುವಂತಹ ಕಾರ್ಯಕ್ರಮಗಳಿಗೆ ಹೋಗುವುದು ಸರಿಯಲ್ಲ ಎಂಬ ಮುನ್ನೆಚ್ಚರಿಕೆಯನ್ನು ಜನರು ವಹಿಸುತ್ತಿದ್ದಾರೆ. ತಜ್ಞರು, ಆರೋಗ್ಯ ಇಲಾಖೆಯವರು ಕೂಡ ಇದೇ ಸಲಹೆ ನೀಡುತ್ತಿದ್ದಾರೆ. ಇವೆಲ್ಲದರ ಪರಿಣಾಮ, ಹೋಳಿಯ ಬಣ್ಣದಾಟ ಮಾಸುವ ಸಾಧ್ಯತೆ ಕಂಡುಬಂದಿದೆ. ಅಲ್ಲದೇ, ದ್ವಿತೀಯ ಪಿಯು ‍ಪರೀಕ್ಷೆಯೂ ನಡೆಯುತ್ತಿರುವುದರಿಂದ, ಆ ವಿದ್ಯಾರ್ಥಿಗಳಲ್ಲಿ ಬಹುತೇಕರು ಹಬ್ಬದಿಂದ ದೂರ ಉಳಿಯುವ ನಿರೀಕ್ಷೆ ಇದೆ.

‘ಕೋವಿಡ್-19 ಭೀತಿ ಇರುವುದರಿಂದಾಗಿ, ಹೋಳಿಯಿದ ದೂರ ಉಳಿಯಲು ನಿರ್ಧರಿಸಿದ್ದೇವೆ. ಹಬ್ಬಕ್ಕಿಂತಲೂ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಜೊತೆಗೆ, ಮಕ್ಕಳಿಗೆ ಪರೀಕ್ಷೆಗಳೂ ಇವೆ. ಹೀಗಾಗಿ, ಈ ಬಾರಿ ಔಪಚಾರಿಕವಾಗಿ ಮನೆಯಲ್ಲೇ ಹಬ್ಬ ಆಚರಿಸಲು ನಿರ್ಧರಿಸಿದ್ದೇವೆ’ ಎಂದು ಸದಾಶಿವನಗರದ ನಿವಾಸಿ ಗಜಾನನ ಪಾಟೀಲ ಪ್ರತಿಕ್ರಿಯಿಸಿದರು.

‘ಕೆಮಿಕಲ್‌ಯುಕ್ತ ಬಣ್ಣಗಳನ್ನು ಬಳಸಬಾರದು. ನೈಸರ್ಗಿಕ ಬಣ್ಣಗಳನ್ನು ಹಚ್ಚಬೇಕು. ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಒಳ್ಳೆಯದಲ್ಲ. ಹೆಚ್ಚಿನ ಜನಸಂದಣಿ ಇರುವಂತಹ ಕಾರ್ಯಕ್ರಮಗಳನ್ನು ನಿಯಂತ್ರಿಸುವುದು ಒಳಿತು. ಆಚರಣೆ ಆರೋಗ್ಯಕರವಾಗಿರಬೇಕು. ಉಸಿರಾಟಕ್ಕೆ ತೊಂದರೆಯಾಗಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ. ಮುನ್ಯಾಳ


Spread the love

About Laxminews 24x7

Check Also

ಕೇಂದ್ರ ಸರ್ಕಾರ ರಾಜ್ಯಕ್ಕೆ 2.30 ಲಕ್ಷ ಸಾವಿರ ಕೋಟಿ ರೂ. ನೀಡಿದೆ;ಜೋಶಿ

Spread the loveಕರ್ನಾಟಕದಲ್ಲಿ ಬರಗಾಲ ಆವರಿಸಿದ್ದು, ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಕೂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ