Breaking News
Home / ರಾಜಕೀಯ / ತೇಲಿ ಹೋಯ್ತು ಸೋಯಾಬೀನ್ ಬೆಳೆ; ಧಾರವಾಡದಲ್ಲಿ ಸುರಿದ ಮಳೆಗೆ ರೈತರು ಕಂಗಾಲು

ತೇಲಿ ಹೋಯ್ತು ಸೋಯಾಬೀನ್ ಬೆಳೆ; ಧಾರವಾಡದಲ್ಲಿ ಸುರಿದ ಮಳೆಗೆ ರೈತರು ಕಂಗಾಲು

Spread the love

ಧಾರವಾಡ: ಕಳೆದ ವರ್ಷದಿಂದ ರೈತರು ಕೊರೊನಾ ಸೋಂಕು, ಲಾಕ್​ಡೌನ್ ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಕೊರೊನಾ ಎರಡನೇ ಅಲೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದೆಲ್ಲದರ ಮಧ್ಯೆಯೇ ಈ ಬಾರಿ ಉತ್ತಮ ಮುಂಗಾರು ಇದ್ದಿದ್ದರಿಂದ ರೈತರು ಕೊಂಚ ಉತ್ಸಾಹದಿಂದ ಕೃಷಿ ಚಟುವಟಿಕೆ ಆರಂಭಿಸಿದ್ದರು. ಆದರೆ ನಿನ್ನೆ ಸುರಿದ ಮಳೆಗೆ ರೈತರ ಕನಸುಗಳೇ ಕೊಚ್ಚಿಕೊಂಡು ಹೋಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಮಳೆರಾಯನ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.

ಧಾರವಾಡದ ಬಹುತೇಕ ರೈತರು ಅದಾಗಲೇ ಬಿತ್ತನೆ ಕೆಲಸ ಮುಗಿಸಿದ್ದರು. ಅಲ್ಲದೆ ಮಳೆಯ ಆಗಮನಕ್ಕಾಗಿ ಕಾದು ಕೂತಿದ್ದರು. ಅವರ ನಿರೀಕ್ಷೆಯಂತೆಯೇ ಮಳೆಯೂ ಬಂತು. ಆದರೆ ಈ ಮಳೆಯಿಂದ ಎಷ್ಟು ಜನ ರೈತರಿಗೆ ಖುಷಿಯಾಗಿದೆಯೋ ಗೊತ್ತಿಲ್ಲ. ಆದರೆ ಅನೇಕ ರೈತರ ಕನಸು ನುಚ್ಚುನೂರಾಗಿದೆ. ಅದಾಗಲೇ ಬಿತ್ತನೆಯಾಗಿದ್ದ ಹೊಲಗಳಿಗೆ ನೀರು ನುಗ್ಗಿ, ಎಲ್ಲ ಬೀಜಗಳು ಕೊಚ್ಚಿ ಹೋಗಿದೆ.

ಧಾರವಾಡ ತಾಲೂಕಿನ ದಾಸನಕೊಪ್ಪ, ಲಕಮಾಪುರ ಸೇರಿದಂತೆ ಅನೇಕ ಹಳ್ಳಿಗಳ ರೈತರು ಅದಾಗಲೇ ಸೋಯಾ ಬೀನ್ ಬಿತ್ತನೆ ಮಾಡಿದ್ದರು. ಅಷ್ಟೇ ಅಲ್ಲ, ಬಹುತೇಕ ರೈತರು ಗೊಬ್ಬರವನ್ನು ಕೂಡ ಹಾಕಿದ್ದರು. ಆದರೆ ಇದೀಗ ಸುರಿದ ಮಳೆಯಿಂದಾಗಿ ನೀರು ಹೊಲಗಳಿಗೆ ನುಗ್ಗಿ ಬೀಜದ ಜೊತೆಗೆ ಗೊಬ್ಬರವನ್ನೂ ಹೊತ್ತೊಯ್ದಿದೆ. ಹೀಗೆ ನೀರು ಹೊಲಗಳಿಗೆ ನುಗ್ಗಲು ಕಾರಣ ಅಲ್ಲಲ್ಲಿ ನಿರ್ಮಿಸಲಾಗಿರುವ ಸೇತುವೆಗಳು.

ರಸ್ತೆಗಳ ಮಧ್ಯೆ ಅಲ್ಲಲ್ಲಿ ನಿರ್ಮಿಸಲಾಗಿರುವ ಸೇತುವೆಗಳ ಕೆಳಗಡೆಯಿಂದ ಹಳ್ಳ, ಕಾಲುವೆ ನೀರು ಹರಿದು ಹೋಗಬೇಕು. ಆದರೆ ಈ ಸೇತುವೆಗಳನ್ನು ಅವೈಜಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ನೀರು ಸರಾಗವಾಗಿ ಹರಿದು ಹೋಗದೇ ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಈ ಸಮಸ್ಯೆ ಒಂದು ಕಡೆಯಾದರೆ, ನಿರ್ಮಾಣವಾಗಿರುವ ಸೇತುವೆಗಳು ಒಂದೇ ವರ್ಷದಲ್ಲಿ ಬಿರುಕು ಬಿಟ್ಟಿರುವ ಸಮಸ್ಯೆ ಮತ್ತೊಂದು ಕಡೆಗೆ ಎಂದು ರೈತ ಮಡಿವಾಳಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಿತ್ತನೆ ಕಾರ್ಯ ಮಾಡಿದ್ದಾರೆ. ಆದರೆ ಇದೀಗ ಮಳೆರಾಯನ ಹೊಡೆತದಿಂದಾಗಿ ಅದೆಲ್ಲ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ. ಪ್ರತಿವರ್ಷ ಒಂದಿಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ಈ ಬಾರಿ ಮುಂಗಾರು ಆರಂಭದಲ್ಲಿಯೇ ದೊಡ್ಡ ಹೊಡೆತ ನೀಡಿದೆ. ಸರ್ಕಾರ ಇದನ್ನೆಲ್ಲವನ್ನು ಅರಿತು ರೈತರ ನೆರವಿಗೆ ನಿಲ್ಲಬೇಕು ಎನ್ನುವುದು ಸದ್ಯ ರೈತರ ಒತ್ತಾಯವಾಗಿದೆ.


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ