ದಾವಣಗೆರೆ : ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಅರಣ್ಯ ಇಲಾಖೆ ನಡೆಸುವ ವನಮಹೋತ್ಸವದಲ್ಲಿ ರಸ್ತೆಯ ಬದಿಗಳಲ್ಲಿ ಎತ್ತರದ ಸಸಿಗಳನ್ನು ನೆಡಲು ಆದ್ಯತೆ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದಾವಣಗೆರೆಯಲ್ಲಿಂದು ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಸಚಿವರು, ಎತ್ತರದ ಸಸಿಗಳನ್ನು ನೆಟ್ಟರೆ, ಅವು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಹಸಿರು ವಲಯ ಹೆಚ್ಚಳಕ್ಕೆ ಇಂಬು ನೀಡುತ್ತದೆ ಎಂದರು.
ಒತ್ತುವರಿ ತೆರವಿಗೆ ಸೂಚನೆ:
ಅರಣ್ಯ ಪ್ರದೇಶದ ಒತ್ತುವರಿ ಆಗದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ ಸಚಿವರು, 2015ಕ್ಕೂ ಮೊದಲು ಪಟ್ಟಾಭೂಮಿ ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವ ಪ್ರಕರಣ ಹೊರತು ಪಡಿಸಿ ಉಳಿದ ಎಲ್ಲ ಅರಣ್ಯ ಒತ್ತುವರಿ ತೆರವಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 2ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿಯಾಗಿದ್ದು, ನ್ಯಾಯಾಲಯದಲ್ಲಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ವಹಿಸಲೂ ಸೂಚಿಸಿದರು.
ನೀರಿನ ಗುಣಮಟ್ಟ ಪರಿಶೀಲನೆಗೆ ಸೂಚನೆ:
ನದಿ, ಕೆರೆ, ಕೊಳವೆಬಾವಿ ಸೇರಿದಂತೆ ಸಾರ್ವಜನಿಕರಿಗೆ ಪೂರೈಕೆ ಮಾಡುವ ನೀರಿನ ಗುಣಮಟ್ಟವನ್ನು ತಪಾಸಣೆ ಮಾಡಿ, ಕಲುಷಿತ ನೀರು ಪೂರೈಕೆ ಆಗುತ್ತಿದ್ದರೆ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನೋಟಿಸ್ ನೀಡಿದ ನಂತರವೂ ಕಲುಷಿತ ನೀರು ಪೂರೈಕೆ ಮಾಡುತ್ತಿದ್ದರೆ ಅಂತಹ ಸ್ಥಳೀಯ ಸಂಸ್ಥೆಗಳ ವಿರುದ್ಧ ಜಲ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಲು ನಿರ್ದೇಶಿಸಿದ ಸಚಿವರು, ಯಾವುದೇ ಜಲ ಮೂಲಕ್ಕೆ ಸಂಸ್ಕರಿಸದ ತ್ಯಾಜ್ಯ ನೀರು ಸೇರದಂತೆ ಕ್ರಮ ವಹಿಸಲು ತಿಳಿಸಿದರು.
ಹರಿಹರ ಪಾಲಿಫೈಬರ್ಸ್ ಸಂಸ್ಥೆ ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ ಎಂಬ ದೂರುಗಳಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದ ಸಚಿವರು, ಒಂದೊಮ್ಮೆ ಜಲ, ವಾಯು ಮಾಲಿನ್ಯ ಉಂಟಾಗುತ್ತಿದ್ದರೆ ಕಾನೂನಿ ರೀತ್ಯ ಕ್ರಮ ಜರುಗಿಸಲು ಸೂಚಿಸಿದರು.
ಪರಿಸರ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.