ಬೆಂಗಳೂರು: ವೈದ್ಯಕೀಯ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವತಿಯಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ಭಾನುವಾರ ನಡೆಯಲಿದ್ದು, ಈ ಸಂಬಂಧ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿ ಹೊರಡಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಒಟ್ಟು 65 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ದೋಷರಹಿತ ಹಾಗೂ ಸುಸೂತ್ರವಾಗಿ ಪರೀಕ್ಷೆ ನಡೆಸುವ ದೃಷ್ಟಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಕಲಂ 163ರಡಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಹತ್ತಿರದ ಎಲ್ಲಾ ಜೆರಾಕ್ಸ್ ಅಂಗಡಿ, ಕಂಪ್ಯೂಟರ್ ಸೆಂಟರ್ಗಳನ್ನು ಮುಚ್ಚುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಆದೇಶ ಹೊರಡಿಸಿದ್ದಾರೆ.
ಅಣಕು ಪ್ರದರ್ಶನ: ದೇಶಾದ್ಯಂತ 500 ನಗರಗಳಲ್ಲಿ 5,453 ಕೇಂದ್ರದಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಸರಾಗ ಮತ್ತು ಸುರಕ್ಷಿತ ಕ್ರಮದ ಮೂಲಕ ನಡೆಸುವ ಉದ್ದೇಶದಿಂದ ಎಲ್ಲಾ ಕೇಂದ್ರದಲ್ಲಿ ಅಣಕು ಪ್ರದರ್ಶನ ನಡೆಸಲಾಗಿದೆ. ಈ ಅಣಕು ಪ್ರದರ್ಶನದಲ್ಲಿ ಮೊಬೈಲ್ ಸಿಗ್ನಲ್ ಜಾಮರ್ಗಳ ಕಾರ್ಯಕ್ಷಮತೆ, ಸಿಬ್ಬಂದಿ ಲಭ್ಯತೆ ಮತ್ತು ಬಯೋಮೆಟ್ರಿಕ್ ದೃಢೀಕರಣ ವಿಧಾನಗಳ ಪರಿಶೀಲನೆ ನಡೆಸಲಾಗಿದೆ.
Laxmi News 24×7