ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕೆ ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
![]()
ಚರಣ್ ರಾಜ್, ಹರ್ಷವರ್ಧನ್, ವಿನಯ್ ಹಾಗೂ ವೆಂಕಟಸ್ವಾಮಿ ಎಂಬುವರನ್ನು ಬಂಧಿಸಿ 38,400 ಮೌಲ್ಯದ 32 ಐಪಿಎಲ್ ಟಿಕೆಟ್ಗಳು ಹಾಗೂ ನಾಲ್ಕು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಯಶವಂತಪುರದಲ್ಲಿ ಚರಣ್ ರಾಜ್ ಹಾಗೂ ಇನ್ನಿತರ ಆರೋಪಿಗಳು ಮಿಲ್ಲರ್ ರಸ್ತೆಯಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದರು. 1,200 ರೂಪಾಯಿ ಮುಖಬೆಲೆಯ ಟಿಕೆಟ್ ಅನ್ನು 12 ಸಾವಿರಕ್ಕೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ದಂಧೆಕೋರರನ್ನು ಬಂಧಿಸಲಾಗಿದೆ. ಆರೋಪಿಗಳ ವಾಟ್ಸಾಪ್ ಪರಿಶೀಲಿಸಿದಾಗ ಈ ಹಿಂದೆ ಐಪಿಎಲ್ ಟಿಕೆಟ್ ಮಾರಾಟ ಮಾಡಿರುವ ಸಾಕ್ಷ್ಯಾಧಾರ ದೊರಕಿವೆ. ಆರೋಪಿಗಳಿಗೆ ಟಿಕೆಟ್ ಎಲ್ಲಿ? ಮತ್ತು ಹೇಗೆ ಖರೀದಿ ಮಾಡುತ್ತಿರುವ ಎಂಬುದರ ಬಗ್ಗೆ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7