ಬೆಂಗಳೂರು : ಜಪಾನ್ ದೇಶದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಯಲ್ಲಿದ್ದರೂ ಉದ್ಯೋಗಾವಕಾಶಗಳು ವಿಕಾಸಗೊಳ್ಳುತ್ತಿದ್ದು, ಆಡಳಿತಾತ್ಮಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಭಾರತೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ ಎಂದು ಜಪಾನ್ ವಿದೇಶಾಂಗ ಸಚಿವಾಲಯದ ಸಲಹೆಗಾರ ಅಶೋಕ್ ಕುಮಾರ್ ಚಾವ್ಲಾ ತಿಳಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಜಪಾನ್ ಕಾನ್ಸುಲೇಟ್ ಜನರಲ್ ಸಹಯೋಗದಲ್ಲಿ ಶನಿವಾರ ನಡೆದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದ 40ನೇ ವಾರ್ಷಿಕೋತ್ಸವ ಹಾಗೂ ಜಪಾನ್ನಲ್ಲಿ ಇಂದಿನ ಉದ್ಯೋಗಾವಕಾಶಗಳ ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಭಾಷೆ ಅತ್ಯಂತ ಮುಖ್ಯ : ”ಇದು ಇಂಡಿಯಾ–ಜಪಾನ್ ಐತಿಹಾಸಿಕ, ಸಾಮಾಜಿಕ ಆಧ್ಯಾತ್ಮಿಕ ಮತ್ತು ತಂತ್ರಜ್ಞಾನದ ವಿನಿಮಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಎರಡೂ ದೇಶಗಳ ನಡುವೆ ಸಾಕಷ್ಟು ವ್ಯವಹಾರಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣಗಳ ವಿನಿಮಯ ಆಗಬೇಕಾಗಿದ್ದು, ಇದಕ್ಕಾಗಿ ಭಾಷೆ ಅತ್ಯಂತ ಮುಖ್ಯವಾಗಿದೆ. ಅಲ್ಲಿನ ಉದ್ಯೋಗಾವಕಾಶಗಳು ಲಭ್ಯವಾಗಬೇಕಾದರೆ ನಾಲ್ಕು ಹಂತಗಳಲ್ಲಿ ಉತ್ತೀರ್ಣರಾಗಬೇಕಾಗಿದ್ದು, ಅದಕ್ಕೆ ಸಿದ್ಧರಾಗಬೇಕಾಗಿದೆ” ಎಂದು ಹೇಳಿದರು.
ಇತಿಹಾಸದ ಬೆಳಕು ಚೆಲ್ಲುವ ಜಪಾನಿ ಸಿನಿಮಾಗಳು : ”ಜಪಾನ್ ಕಾನ್ಸುಲೇಟ್ ಜನರಲ್ ನಾಕಾನೆ ಮಾತನಾಡಿ, ಸಿನಿಮಾ ಎಂಬುದು ಬರೀ ಮನೋರಂಜನೆಯಲ್ಲ. ಅದು ಸಮಾಜಕ್ಕೆ ದಾರಿ ತೋರುವ ಮಾರ್ಗವಾಗಿದೆ. ಜಪಾನಿ ಸಿನಿಮಾಗಳು ಅಲ್ಲಿನ ಇತಿಹಾಸದ ವಿವಿಧ ಆಯಾಮಗಳ ಕುರಿತಂತೆ ಬೆಳಕು ಚೆಲ್ಲುತ್ತವೆ” ಎಂದು ಹೇಳಿದರು.
”ಬೆಂಗಳೂರು ವಿವಿಯಲ್ಲಿ ಕಳೆದ 40 ವರ್ಷಗಳಿಗೂ ಮುನ್ನವೇ ಪ್ರಾರಂಭವಾಗಿರುವ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರವು ವಿವಿಧ ಸಂಸ್ಕೃತಿಗಳ ವಿನಿಮಯಕ್ಕೆ ನೆರವಾಗುತ್ತಿದೆ. ಹೆಚ್ಚು ಹೆಚ್ಚು ಜನರು ಇದನ್ನು ಬಳಸಿಕೊಳ್ಳಬೇಕಿದೆ” ಎಂದು ಸಲಹೆ ನೀಡಿದರು.