ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಇದರ ಜೊತೆಗೆ, ಬಾಲ್ಯ ವಿವಾಹ ಪ್ರಕರಣಗಳು ಏರಿಕೆ ಕಾಣುತ್ತಿರುವ ಆತಂಕಕಾರಿ ವಿಚಾರವನ್ನು ರಾಜ್ಯ ಸರ್ಕಾರ ತಿಳಿಸಿದೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಾದ ಮಕ್ಕಳ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದ ಬಿಜೆಪಿ ಶಾಸಕ ಚನ್ನಬಸಪ್ಪ ಅವರ ಪ್ರಶ್ನೆಗೆ ರಾಜ್ಯ ಸರ್ಕಾರ ಈ ಆತಂಕಕಾರಿ ಉತ್ತರ ನೀಡಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ ಕಂಡಿರುವುದಾಗಿ ತಿಳಿಸಿದೆ.
ಅದರಂತೆ, ರಾಜ್ಯದಲ್ಲಿ 2021/22ರಲ್ಲಿ 2,205 ಪೋಕ್ಸೋ ಪ್ರಕರಣ ದಾಖಲಾಗಿದೆ. 2022/23ರಲ್ಲಿ 2,804 ಪ್ರಕರಣಗಳು ದಾಖಲಾಗಿದ್ದರೆ, 2023/24ರಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ 3,397ಗೆ ಏರಿಕೆಯಾಗಿದೆ ಎಂದು ಉತ್ತರ ನೀಡಿದೆ. ಇನ್ನು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,164 ಪೋಕ್ಸೋ ಪ್ರಕರಣಗಳು ದಾಖಲಾಗಿವೆ.