Breaking News
Home / ಜಿಲ್ಲೆ / ಬೆಳಗಾವಿ / ಕಿತ್ತೂರು / ಕಿತ್ತೂರು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮಂಗಳವಾರ ಇತಿಹಾಸಪ್ರಿಯರ ದಂಡೇ ಲಗ್ಗೆ ಇಟ್ಟಿತ್ತು

ಕಿತ್ತೂರು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮಂಗಳವಾರ ಇತಿಹಾಸಪ್ರಿಯರ ದಂಡೇ ಲಗ್ಗೆ ಇಟ್ಟಿತ್ತು

Spread the love

ಕಿತ್ತೂರು: ಇಲ್ಲಿನ ಕೋಟೆ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮಂಗಳವಾರ ಇತಿಹಾಸಪ್ರಿಯರ ದಂಡೇ ಲಗ್ಗೆ ಇಟ್ಟಿತ್ತು. ಕಿರಿಯರಿಂದ ಹಿರಿಯರವರೆಗೆ ಎಲ್ಲ ವಯೋಮಾನದವರೂ ಭೇಟಿ ನೀಡಿ, ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ಮಾಹಿತಿ ಸಂಗ್ರಹಿಸಿದರು.

 

ಇಲ್ಲಿರುವ ಕಿತ್ತೂರು ಅರಮನೆ ಬಾಗಿಲುಗಳು, ಕಿಟಕಿಗಳು, ಸೈನ್ಯ ಬಳಸಿದ ಖಡ್ಗ, ಗುರಾಣಿ, ಚಿಲಕತ್ತು (ಯುದ್ಧದ ಸಂದರ್ಭದಲ್ಲಿ ಧರಿಸುವ ಕಬ್ಬಿಣದ ಪೋಷಾಕು) ಮತ್ತಿತರ ಶಸ್ತ್ರಾಸ್ತ್ರಗಳು, ಸೈನಿಕರ ಉಡುಪುಗಳು, ಫಿರಂಗಿ ಗುಂಡುಗಳು, ವೀರಗಲ್ಲುಗಳು, ಮಹಾಸತಿ ಕಲ್ಲುಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸಿದರು.

ಅರೂವರೆ ಅಡಿಯಷ್ಟು ಎತ್ತರದ ಮನುಷ್ಯರು ಹಾಕಿಕೊಳ್ಳುವಷ್ಟು ದೊಡ್ಡದಾದ ಬಣ್ಣದ ಬಟ್ಟೆಯ ಉಡುಪುಗಳನ್ನು ಕಂಡು ಕಿತ್ತೂರು ಸೈನಿಕರ ದಾಡಸಿತನವನ್ನೂ ಲೆಕ್ಕ ಹಾಕಿದರು.

ಕಲ್ಯಾಣದ ಚಾಲುಕ್ಯರ ಕಾಲದಿಂದ ವಿಜಯನಗರೋತ್ತರ ಕಾಲದವರೆಗಿನ ವಿವಿಧ ಶೈಲಿಯ ಧಾರ್ಮಿಕ, ಲೌಕಿಕ ಶಿಲ್ಪಗಳು ಹಾಗೂ ಶಾಸನಗಳ ಪ್ರದರ್ಶನ ಕಣ್ತುಂಬಿಕೊಂಡರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಇದೇ ಸಂಗ್ರಹಾಲಯದಲ್ಲಿ ಸ್ಮಾರಕಗಳ ಸಂರಕ್ಷಣೆ ಕುರಿತಾಗಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ಅಲ್ಲಿ ಸಂರಕ್ಷಣಾ ಪೂರ್ವದಲ್ಲಿ ಇದ್ದ ಸ್ಮಾರಕಗಳ ಸ್ಥಿತಿ, ಸಂರಕ್ಷಣೆ ನಂತರದ ಚಿತ್ರಣ ಕುರಿತಾದ ಬದಲಾವಣೆ ಗಮನಿಸಿದರು.

ಕಿತ್ತೂರು ಉತ್ಸವಕ್ಕೆ ಬಂದಿರುವ ಇತಿಹಾಸಪ್ರಿಯರು, ವಿದ್ಯಾರ್ಥಿಗಳು ಪ್ರಾಚ್ಯುವಸ್ತು ಸಂಗ್ರಹಾಲಯಕ್ಕೆ ಮೂರು ದಿನ ನಿರಂತರವಾಗಿ ಭೇಟಿ ನೀಡಿದ್ದಾರೆ. ನಮ್ಮಲ್ಲಿರುವ ಐತಿಹಾಸಿಕ ಪಳಿಯುಳಿಕೆಗಳ ಮಾಹಿತಿ ಪಡೆಯುತ್ತಿದ್ದಾರೆ ಎಂದು ಕ್ಯುರೇಟರ್ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
*
ಗಮನ ಸೆಳೆದ ವಂಶಾವಳಿ

ಕಿತ್ತೂರು ಸಂಸ್ಥಾನವನ್ನು ಆಳಿದ ದೇಸಗತಿ ಮನೆತನದ ವಂಶಾವಳಿಯ ಪಟವನ್ನು ಕಂಡು ಬೆರಗಾಗದವರೇ ಇಲ್ಲ. ಮೂಲ ಪುರುಷ ಮಲ್ಲಪ್ಪಗೌಡ ದೇಸಾಯಿಯಿಂದ ಆರಂಭವಾಗಿ ಹಲವಾರು ತಲೆಮಾರುಗಳು ಕಳೆದು, ಪ್ರಸಕ್ತ ತಲೆಮಾರಿನವರೆಗೂ ಎಲ್ಲರ ವಂಶಾವಳಿಯನ್ನೂ ಈ ಪಟದಲ್ಲಿ ಕಾಣಬಹುದು.

ಗಾಜಿನ ಕಪಾಟಿನಲ್ಲಿ ಹಾಕಿದ ಈ ಪಟ ಕಂಡು ಹಲವರು ಫೋಟೊ ಕ್ಲಿಕ್ಕಿಸಿದರು. ವಂಶವೃಕ್ಷದಲ್ಲಿ ರಾಣಿ ಚನ್ನಮ್ಮ, ಮಲ್ಲಸರ್ಜ, ಶಿವಲಿಂಗ ಸರ್ಜ ಅವರ ಹೆಸರುಗಳು ಎಲ್ಲಿವೆ ಎಂದು ಕುತೂಹಲದಿಂದ ತಡಕಾಡಿದರು.

ಮೂಲ ಮೋಡಿ ಲಿಪಿಯಲ್ಲಿರುವ ಈ ಪಟವನ್ನು ಪಕ್ಕದಲ್ಲಿ ಕನ್ನಡದಲ್ಲೂ ನೀಡಲಾಗಿದೆ.
*
ಸರ್ವಧರ್ಮ ಸಹಿಷ್ಣುಗಳು

ವಸ್ತು ಸಂಗ್ರಹಾಲಯದಲ್ಲಿ ಶಿವಪಾರ್ವತಿಯ ಶಿಲ್ಪಕಲಾಕೃತಿಗಳಿವೆ, ವಿಷ್ಣುವಿನ ಮೂರ್ತಿಗಳೂ ಇವೆ. ಭಗವಾನ್ ಬುದ್ಧ, ಮಹಾವೀರ, ಕ್ಷತ್ರಿಯ ವೀರರು… ಹೀಗೆ ವಿವಿಧ ಧರ್ಮಗಳ ಮಹಾತ್ಮರ ಶಿಲ್ಪಕಲಾ ಕೃತಿಗಳೂ ಇಲ್ಲಿವೆ. ಕಿತ್ತೂರು ಸಂಸ್ಥಾನದ ಅರಸರು ಸರ್ವಧರ್ಮ ಸಹಿಷ್ಣುಗಳು, ಪೋಷಕರೂ ಆಗಿದ್ದರು ಎಂಬುದಕ್ಕೆ ಇಲ್ಲಿ ಹಲವು ದಾಖಲೆಗಳ ಸಂಗ್ರಹವಿದೆ.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ