Breaking News

ಬಂಗಾಳದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌, ಸುಗಂಧ ದ್ರವ್ಯ| 77 ಇವಿಎಂನಲ್ಲಿ ಟ್ಯಾಂಪರಿಂಗ್‌ – ಮೇ 2ರ ಒಳಗಡೆ ಮರುಮತದಾನ

Spread the love

ಕೋಲ್ಕತ್ತಾ: ಪಶ್ಚಿಮ ಬಂಗಾಳದ  ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ 77 ಇವಿಎಂ  ಯಂತ್ರಗಳಲ್ಲಿ ಅಕ್ರಮ ಅಥವಾ ತಿರುಚುವಿಕೆ ನಡೆದಿದೆ ಎಂಬ ದೂರುಗಳು ಕೇಳಿಬಂದಿದ್ದು, ಈ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ.

ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರ ಅಡಿಯಲ್ಲಿ ಬರುವ ಫಾಲ್ಟಾ  ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ಇವಿಎಂ ಯಂತ್ರಗಳ ಮೇಲಿನ ಕೆಲವು ಅಭ್ಯರ್ಥಿಗಳ ಬಟನ್ ಅಥವಾ ಪಕ್ಷದ ಗುರುತಿನ ಮೇಲೆ ಅಥವಾ ಬಟನ್ ಮೇಲೆ ಕಪ್ಪು ಟೇಪ್, ಸೆಲೋಫೇನ್ ಟೇಪ್ ಅಥವಾ ಸುಗಂಧ ದ್ರವ್ಯವನ್ನು ಹಚ್ಚುವ ಮೂಲಕ ಮತ ಚಲಾವಣೆಗೆ ಅಡ್ಡಿಪಡಿಸಲು ಪ್ರಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ದೂರುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ವೆಬ್‌ಕಾಸ್ಟಿಂಗ್ (Webcasting) ವಿಡಿಯೋಗಳನ್ನು ಮತ್ತು ಪ್ರಿಸೈಡಿಂಗ್ ಅಧಿಕಾರಿಗಳ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಒಂದು ವೇಳೆ ಇವಿಎಂ ಮೇಲೆ ಟೇಪ್ ಅಂಟಿಸಿರುವುದು ಸಾಬೀತಾದಲ್ಲಿ, ಅಂತಹ ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಿದೆ.

ಫಾಲ್ಟಾ ಒಂದರಲ್ಲೇ ಅತಿ ಹೆಚ್ಚು ಅಂದರೆ 32 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿದ್ದು, ಇವುಗಳಲ್ಲಿ ಸುಮಾರು 20 ಮತಗಟ್ಟೆಗಳಲ್ಲಿ ಮರುಮತದಾನ ಖಚಿತವಾಗಿ ನಡೆಯುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (CEO) ಮನೋಜ್ ಕುಮಾರ್ ಅಗರ್ವಾಲ್ ಅವರು ಈ ದೂರುಗಳನ್ನು ಪರಿಶೀಲಿಸುತ್ತಿದ್ದು, ದೂರುಗಳು ಸಾಬೀತಾದಲ್ಲಿ ಆಯಾ ಮತಗಟ್ಟೆಗಳಲ್ಲಿ ಮೇ 2 ರೊಳಗೆ ಮರುಮತದಾನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಒಂದು ವೇಳೆ ಕ್ಷೇತ್ರದ ಹೆಚ್ಚಿನ ಸಂಖ್ಯೆಯ ಮತಗಟ್ಟೆಗಳಲ್ಲಿ ಇಂತಹ ಅಕ್ರಮಗಳು ಕಂಡುಬಂದರೆ, ಇಡೀ ವಿಧಾನಸಭಾ ಕ್ಷೇತ್ರಕ್ಕೇ ಮರುಮತದಾನ ನಡೆಸುವ ಬಗ್ಗೆಯೂ ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತಿದೆ.

ಇವಿಎಂ ಬಟನ್‌ಗಳಿಗೆ ಸುಗಂಧ ದ್ರವ್ಯ, ಶಾಯಿ (Ink) ಅಥವಾ ಅಂಟು (Glue) ಹಚ್ಚುವುದನ್ನು ಇವಿಎಂ ತಿರುಚುವಿಕೆ (Tampering) ಎಂದು ಪರಿಗಣಿಸಲಾಗುವುದು ಮತ್ತು ಅಂತಹ ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶ ನೀಡಲಾಗುವುದು ಎಂದು ಆಯೋಗ ಮೊದಲೇ ತಿಳಿಸಿತ್ತು.
ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿರುವ ಕಾರಣ ಮೇ 2ರ ಒಳಗಡೆ ಅಕ್ರಮ ಎಸಗಿದ ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ.

ಸುಗಂಧ ದ್ರವ್ಯ ಲೇಪಿಸಿದ್ದು ಯಾಕೆ?
ನಿರ್ದಿಷ್ಟ ಅಭ್ಯರ್ಥಿಯ ಬಟನ್‌ಗೆ ಸುಗಂಧ ದ್ರವ್ಯವನ್ನು ಹಚ್ಚುವುದರಿಂದ, ಆ ಬಟನ್ ಒತ್ತಿದ ಮತದಾರನ ಬೆರಳಿಗೆ ಆ ಪರಿಮಳ ಅಂಟಿಕೊಳ್ಳುತ್ತದೆ. ಮತಗಟ್ಟೆಯಿಂದ ಹೊರಬಂದ ನಂತರ ಮತದಾರರ ಬೆರಳನ್ನು ಪರಿಮಳ ನೋಡುವ ಮೂಲಕ ಅವರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕೆಲವು ರಾಜಕೀಯ ಕಾರ್ಯಕರ್ತರು ಈ ತಂತ್ರ ಬಳಸುತ್ತಾರೆ.

ಮತದಾರರು ಯಾರಿಗೆ ಮತ ನೀಡಿದ್ದಾರೆ ಎಂಬುದು ಈ ರೀತಿ ಬಹಿರಂಗವಾಗುವುದರಿಂದ, ಅವರನ್ನು ಬೆದರಿಸಲು ಅಥವಾ ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಒತ್ತಡ ಹೇರಲು ಇದು ಸಹಕಾರಿಯಾಗುತ್ತದೆ.

ಫಾಲ್ಟಾದಲ್ಲಿ ಗಲಾಟೆ
ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ನೇಮಕಗೊಂಡ ಪೊಲೀಸ್ ವೀಕ್ಷಕ ಉತ್ತರ ಪ್ರದೇಶ ಕೆಡರ್‌ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಮತ್ತು ಮತ್ತು ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ, ಅಭಿಷೇಕ್ ಬ್ಯಾನರ್ಜಿ ಆಪ್ತ ಜಹಾಂಗೀರ್ ಖಾನ್ ನಡುವೆ ತೀವ್ರ ಗಲಾಟೆ ನಡೆದಿತ್ತು.

ಜಹಾಂಗೀರ್ ಖಾನ್ ಅವರ ನಿವಾಸ ಮತ್ತು ಚುನಾವಣಾ ಕಚೇರಿಗೆ ಭೇಟಿ ನೀಡಿದ್ದ ಅಜಯ್ ಪಾಲ್ ಶರ್ಮಾ “ಮತದಾರರಿಗೆ ಬೆದರಿಕೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಆಮೇಲೆ ಅಳಬೇಡಿ” ಎಂದು ನೇರವಾಗಿಯೇ ಎಚ್ಚರಿಕೆ ನೀಡಿದ್ದರು.

ಅಜಯ್ ಪಾಲ್ ಶರ್ಮಾ ಅವರನ್ನು ‘ಸಿಂಗಮ್’ ಎಂದು ಕರೆಯಲಾಗುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜಹಾಂಗೀರ್ ಖಾನ್, “ಅವರು ಸಿಂಗಮ್ ಆದರೆ, ನಾನು ಪುಷ್ಪ,ನಾನು ಯಾವುದಕ್ಕೂ ಬಗ್ಗುವುದಿಲ್ಲ” ಎಂದು ಸವಾಲು ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿಯ ಮಗ (ಅಳಿಯ) ಅಭಿಷೇಕ್ ಬ್ಯಾನರ್ಜಿ ಅವರು ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2014 ರಿಂದ ಅಭಿಷೇಕ್‌ ಬ್ಯಾನರ್ಜಿ ಸತತ ಮೂರು ಬಾರಿ ಇಲ್ಲಿ ಗೆದ್ದಿದ್ದಾರೆ. 2019 ರಲ್ಲಿ ಒಟ್ಟು 7,91,127 ಮತ ಪಡೆದು 3.20 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರೆ 2024 ರಲ್ಲಿ ಒಟ್ಟು 10,48,230 ಮತಗಳನ್ನು ಪಡೆದು 7,10,930 ಮತಗಳ ಅಂತರದಿಂದ ಗೆದ್ದಿದ್ದರು.


Spread the love

About Laxminews 24x7

Check Also

25 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ಮಳೆ – 170 ಮರಗಳು ಧರಾಶಾಹಿ, 68 ಕಡೆ ಜಲಾವೃತ

Spread the loveಬೆಂಗಳೂರು:  ಸುರಿದ ಭಾರೀ ಮಳೆಗೆ ನಡೆದ ಅವಾಂತರಗಳು ಒಂದಾ.. ಎರಡಾ..? ಬೇಸಿಗೆ ಮಳೆಗೆ ಇಡೀ ಸಿಲಿಕಾನ್ ಸಿಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ