ಬೆಂಗಳೂರು: ಡ್ಯೂಟಿ ಸಮಯದಲ್ಲೇ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಮಹಿಳೆ ಜೊತೆ ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ ಹಾಸನಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಕಂಡಕ್ಟರ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ಹಾಸನದಿಂದ ಪುತ್ತೂರಿಗೆ ಹೊರಟಿದ್ದರು. ಈ ವೇಳೆ ಟಿಕೆಟ್ ನೀಡುವ ನೆಪದಲ್ಲಿ ಕಂಡಕ್ಟರ್ ಮಹಿಳೆಯ ಪಕ್ಕದಲ್ಲಿ ಬಂತು ಕೂತಿದ್ದನು. ನಂತರ ಪಕ್ಕದಲ್ಲಿ ಕೂತಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸುವುದಕ್ಕೆ ಶುರುಮಾಡಿದ್ದನು.
ಮಹಿಳೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಕಂಡಕ್ಟರ್ ಮಾತ್ರ ಮಹಿಳೆಯ ಕೈ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಕಂಡಕ್ಟರ್‌ಗೆ ಗೊತ್ತಾಗದಂತೆ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕಂಡಕ್ಟರ್ ವರ್ತನೆಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿದ ಕೆಎಸ್ಆರ್‌ಟಿಸಿ ಎಮ್.ಡಿ ಮತ್ತು ಸಿಐಟಿಯು ಸಿಬ್ಬಂದಿ ತನಿಖೆಗೆ ಆದೇಶಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಂಡಕ್ಟರ್ ಪುತ್ತೂರು ಡಿಪೋದಲ್ಲಿ ಕೆಲಸ ಮಾಡುತ್ತಾನೆ ಎಂದು ಗೊತ್ತಾಗಿದೆ. ತನಿಖಾ ಹಂತದಲ್ಲಿ ಇರುವುದರಿಂದ ಸದ್ಯ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪು ಕಂಡುಬಂದರೆ ಯಾವುದೇ ಮೂಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಸಿಐಟಿಯು ಕಾರ್ಯದರ್ಶಿ ಯೋಗೇಶ್‍ಗೌಡ ತಿಳಿಸಿದರು.