ಕಲಬುರಗಿ,ಫೆ,6- ಇಲ್ಲಿ ನಡೆಯುತ್ತಿರುವ 85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಖರೀದಿ ಭರಾಟೆ ಜೋರಾಗಿತ್ತು. ಪುಸ್ತಕಗಳ ಮಾರಾಟಕ್ಕಾಗಿ 300ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ಪ್ರಕಾಶಕರು, ಮುದ್ರಕರು, ಮಾರಾಟ ಮಳಿಗೆಗಳಲ್ಲಿ ಇಟ್ಟಿದ್ದ ಪುಸ್ತಕಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. ಕೆಲವೊಂದು ಮಳಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನ ಇದ್ದರೆ, ಕೆಲವೊಂದು ಮಳಿಗೆಗಳಲ್ಲಿ ಗ್ರಾಹಕರು ವಿರಳವಾಗಿದ್ದರು.
ಅಕ್ಷರ ಜಾತ್ರೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಗುಲ್ಬರ್ಗ ವಿವಿ ಆವರಣದಲ್ಲಿ ತೆರೆದಿರುವ ಮಳಿಗೆಗಳತ್ತ ಉತ್ಸಾಹದಿಂದ ಹೆಜ್ಜೆ ಹಾಕುತ್ತಿರುವ ಉದ್ಯೊಗಾಕಾಂಕ್ಷಿಗಳು, ತಮ್ಮಿಷ್ಟದ ಪುಸ್ತಕಗಳ ಖರೀದಿಯಲ್ಲಿ ತೊಡಗಿರುವುದು ಕಂಡಿತು. ಉಳಿದಂತೆ ಖ್ಯಾತನಾಮ ಸಾಹಿತಿಗಳು ರಚಿಸಿದ ಪುಸ್ತಕಗಳ ಮಾರಾಟ ಅಧಿಕವಾಗಿದೆ.
ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕೃತಿ ಹೆಚ್ಚಿನ ಓದುಗರನ್ನು ಆಕರ್ಷಿಸುತ್ತಿದೆ. ಕಳೆದ ವರ್ಷದ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹೊಲಿಸಿದರೆ, ಈ ಸಲ ಪುಸ್ತಕ ಮಾರಾಟ ಉತ್ತಮವಾಗಿದೆ. ಮೆಧಾವಿ ಪುಸ್ತಕಾಲಯ ಒಂದೇ ದಿನ 6.50 ಲಕ್ಷ ರೂ. ವಹಿವಾಟಿನ ಮೂಲಕ ದಾಖಲೆ ಮಾಡಿದೆ. ಮಂಗಳವಾರ 40 ಸಾವಿರಕ್ಕಿಂತ ಅಧಿಕ ಮೌಲ್ಯದ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು ಮಾರಾಟವಾಗಿವೆ ಎಂದು ಸಪ್ನ ಬುಕ್‍ಹೌಸ್ ವ್ಯವಸ್ಥಾಪಕ ರಾಜಣ್ಣ ಹೇಳಿದರು.
ಗಣ್ಯರಿಗೆ ಭದ್ರತೆ ಒದಗಿಸುವ ನೆಪದಲ್ಲಿ ಪೊಲೀಸರು 2-3 ತಾಸು ಮಳಿಗೆಯೊಳಗೆ ಬಿಡಲಿಲ್ಲ. ಇದರಿಂದ ಒಂದಿಷ್ಟು ತೊಂದರೆಯಾಗಿದ್ದು ನಿಜ. ಈಗ ಸಮಸ್ಯೆ ಬಗೆಹರಿದಿದೆ. ಇಂದು, ನಾಳೆ ಹೆಚ್ಚಿನ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದರು.
ನಮ್ಮ ಮಳಿಗೆಯಲ್ಲಿ ಶೇ.10ರಿಂದ 75 ರಿಯಾಯಿತಿ ನೀಡಲಾಗಿದೆ. ಗದ್ಯಾನುವಾದ, ನಿಘಂಟುಗಳು, ಶತಮಾನೊತ್ಸವ ಮಾಲಿಕೆ ಪುಸ್ತಕಗಳನ್ನೆ ಓದುಗರು ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಕಸಾಪ ಮಾರಾಟ ವಿಭಾಗದ ವ್ಯವಸ್ಥಾಪಕ ವಿ.ಅಶ್ವ. ಕಾಗದ, ಮುದ್ರಣ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೆಲ ಕೃತಿಗಳ ಮಾರಾಟ ದರವೂ ಶೇ.10 ಅಧಿಕವಾಗಿದೆ. ಆದರೆ ಓದುಗರು ಖರೀದಿಯಲ್ಲಿ ಹಿಂದೆ ಬೀಳದಿರುವುದು ವಿಶೇಷ.