Breaking News

ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವೇ? ಹೆಸರು ಸೇರ್ಪಡೆಗೆ ಅವಕಾಶವಿದೆ

Spread the love

ಬೆಳಗಾವಿ: ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಮೊದಲ ಹಂತ ಮುಕ್ತಾಯಗೊಂಡು ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದೆ. ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದಿರುವ ಮತದಾರರು ಆತಂಕಪಡುವ ಅಗತ್ಯವಿಲ್ಲ. ಅರ್ಹ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹಾಗೂ ಮತದಾರರ ಮುಖ್ಯ ನೋಂದಣಾಧಿಕಾರಿ ಕಾರ್ತಿಕ್‌ ಎಂ. ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಪಾಲಿಕೆ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್‌ ಮೊದಲ ಹಂತದ ನಮೂನೆ ವಿತರಣೆ, ಸ್ವೀಕೃತಿ ಹಾಗೂ ಗಣಕೀಕರಣ ಕಾರ್ಯ ಪೂರ್ಣಗೊಂಡಿದೆ. ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಮತದಾರರು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬೇಕು ಎಂದರು.
ಹೆಸರು ಏಕೆ ಹೊರಗುಳಿದಿದೆ?
ಸ್ಥಳಾಂತರ, ಮರಣ, ಅನುಮಾನಾಸ್ಪದ ಪ್ರಕರಣಗಳು ಸೇರಿದಂತೆ ವಿವಿಧ ಕಾರಣಗಳಿಂದ ಕೆಲವು ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಕಾಣಿಸದೇ ಇರಬಹುದು. ಅಂತಹವರು ಇದನ್ನೇ ಅಂತಿಮ ಎಂದು ಭಾವಿಸಬೇಕಿಲ್ಲ. ಎಸ್‌ಐಆರ್‌ ವಿಭಾಗಕ್ಕೆ ಆಕ್ಷೇಪಣೆ ಸಲ್ಲಿಸಿ ತಮ್ಮ ಹಕ್ಕನ್ನು ಮಂಡಿಸಬಹುದು.
ನೋಟಿಸ್‌ ಜಾರಿಯಾದ ಮತದಾರರು ವಿಚಾರಣಾಧಿಕಾರಿ ಅಥವಾ ಎಇಆರ್‌ಒ ಮುಂದೆ ಹಾಜರಾಗಿ, ತಮ್ಮ ಮತದಾರರ ಅರ್ಹತೆಯನ್ನು ದೃಢಪಡಿಸುವ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಪರಿಶೀಲನೆಯ ಬಳಿಕ ಅರ್ಹತೆ ದೃಢಪಟ್ಟರೆ ಹೆಸರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ ಎಂದು ಕಾರ್ತಿಕ್‌ ಎಂ. ತಿಳಿಸಿದರು.
ಹೊಸ ಮತದಾರರಿಗೆ ಫಾರ್ಮ್‌-6
ಮ್ಯಾಪಿಂಗ್‌ ಆಗದಿರುವವರು, ನೋ-ಲಿಂಕೇಜ್‌ ಪ್ರಕರಣದಲ್ಲಿರುವವರು ಹಾಗೂ ಹೊಸದಾಗಿ ಮತದಾರರಾಗಲು ಅರ್ಹರಾದವರು ಫಾರ್ಮ್‌-6 ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಆ.24ರಿಂದ ಸೆ.23ರವರೆಗೆ ಆಕ್ಷೇಪಣೆ ಮತ್ತು ಕ್ಲೇಮ್‌ ಸಲ್ಲಿಸಲು ಅವಕಾಶವಿದೆ. ವಿಲೇವಾರಿ ಪ್ರಕ್ರಿಯೆ ಅ.22ಕ್ಕೆ ಪೂರ್ಣಗೊಂಡು, ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಆಯುಕ್ತರು ತಿಳಿಸಿದರು.
ದಕ್ಷಿಣಕ್ಕಿಂತ ಉತ್ತರದಲ್ಲಿ ಹೆಚ್ಚು ಎಎಸ್‌ಡಿಓ
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 2,52,937 ಮತದಾರರಿದ್ದು, 1,93,755 ನಮೂನೆಗಳು (76.60%) ಗಣಕೀಕರಣಗೊಂಡಿವೆ. 59,182 ಎಎಸ್‌ಡಿಓ ಪ್ರಕರಣಗಳು ದಾಖಲಾಗಿವೆ.
ಉತ್ತರ ಕ್ಷೇತ್ರದಲ್ಲಿ 2,56,678 ಮತದಾರರಿದ್ದು, 1,92,372 ನಮೂನೆಗಳು (74.95%) ಗಣಕೀಕರಣಗೊಂಡಿವೆ. 64,306 ಎಎಸ್‌ಡಿಓ ಪ್ರಕರಣಗಳು ದಾಖಲಾಗಿವೆ.
ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕರಡು ಪಟ್ಟಿಯಲ್ಲಿನ ತಮ್ಮ ಹೆಸರು ಹಾಗೂ ವಿವರಗಳನ್ನು ಮತದಾರರು ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಮನವಿ ಮಾಡಿದರು.
ಎಸ್‌ಐಆರ್‌ ಯಶಸ್ಸಿಗೆ ತಂಡದ ಶ್ರಮ
ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದೊರೆತಿದೆ. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಿಕ್ಷಕರು ಹಗಲಿರುಳು ಶ್ರಮಿಸಿದ್ದಾರೆ. ನಾಗರಿಕರು, ಮೇಯರ್‌, ಉಪಮೇಯರ್‌, ನಗರಸೇವಕರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮದವರು ಸಹಕಾರ ನೀಡಿದ್ದಾರೆ ಎಂದು ಕಾರ್ತಿಕ್‌ ಎಂ. ಕೃತಜ್ಞತೆ ಸಲ್ಲಿಸಿದರು.
“ಕರಡು ಪಟ್ಟಿಯಲ್ಲಿ ಹೆಸರು ಇಲ್ಲವೆಂದು ಗಾಬರಿಯಾಗಬೇಡಿ. ನೀಡಿರುವ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಒದಗಿಸಿ. ಅರ್ಹ ಮತದಾರರ ಹೆಸರು ಸೇರ್ಪಡೆಗೆ ಕಾನೂನುಬದ್ಧ ಅವಕಾಶವಿದೆ” ಎಂದು ಆಯುಕ್ತರು ಮತದಾರರಿಗೆ ಭರವಸೆ ನೀಡಿದರು.
ಡಾ. ಸಿದ್ದು ಹುಲ್ಲೋಳಿ, ಲಕ್ಷ್ಮೀ ನಿಪ್ಪಾಣಿಕರ್‌, ಉದಯಕುಮಾರ್‌ ಟಿ.ಬಿ. ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ

Spread the loveಯಾದಗಿರಿ: ಭೀಮಾ ನದಿಯಲ್ಲಿ  ಸ್ನಾನ ಮಾಡಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ  ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ