ಬಾಗಲಕೋಟೆ: ಕೇವಲ ಪ್ರಕರಣಗಳಿವೆ ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ಕೊಡುವುದಾದರೆ ಕೇಂದ್ರ ಮತ್ತು ವಿವಿಧ ರಾಜ್ಯಗಳ ಅರ್ಧದಷ್ಟು ಮಂತ್ರಿಗಳು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ನಿರಂತರವಾಗಿ ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಜಮಖಂಡಿಯಲ್ಲಿ ಪ್ರತಿಕ್ರಿಯಿಸಿದ ಅವರು ಈ ಪ್ರತಿಭಟನೆ ಕೇವಲ ಗದ್ದಲ ಸೃಷ್ಟಿಸುವುದಕ್ಕಷ್ಟೇ ಸೀಮಿತವಾಗಿದೆ ಎಂದು ಕಿಡಿಕಾರಿದರು.
ಬಿಜೆಪಿಯವರು ಕಳೆದ ಐದು ದಿನಗಳಿಂದ ಸದನದ ಒಳಗೂ-ಹೊರಗೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ ಸುಮ್ಮನೆ ಗಲಾಟೆ ಮಾಡಿ ರಾಜೀನಾಮೆ ಕೇಳುವುದು ಸರಿಯಲ್ಲ. ಅವರಿಗೆ ದಾಖಲೆಗಳಿದ್ದರೆ ಕಾನೂನುಬದ್ಧವಾಗಿ ಚರ್ಚೆಗೆ ಬಂದು, ನೋಟಿಸ್ ನೀಡಲಿ. ಪೂರಕ ದಾಖಲೆಗಳಿದ್ದರೆ ಸರ್ಕಾರ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿರುವ ಅಂಕಿ-ಅಂಶಗಳ ಪ್ರಕಾರ, ಹಲವು ನಾಯಕರ ಮೇಲೆ 19 ರಿಂದ 36 ಪ್ರಕರಣಗಳಿವೆ. ಕೇಂದ್ರ ಸರ್ಕಾರದ ಅರ್ಧದಷ್ಟು ಸಚಿವರು ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮಂತ್ರಿಗಳ ಮೇಲೂ ಕೇಸ್ಗಳಿವೆ. ಎಲ್ಲರ ಮೇಲೂ ಆರೋಪಗಳಿರುವಾಗ ನಾಗೇಂದ್ರ ಅವರೊಬ್ಬರನ್ನೇ ಟಾರ್ಗೆಟ್ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಬಿ. ನಾಗೇಂದ್ರ ಅವರ ಪ್ರಕರಣದಲ್ಲಿ ಲೋಕಾಯುಕ್ತರೇ ಈಗಾಗಲೇ ಕ್ಲೀನ್ಚಿಟ್ ನೀಡಿದ್ದಾರೆ. ಹೀಗಿರುವಾಗ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುವುದು ನಮ್ಮ ಪಕ್ಷದ ಸ್ಪಷ್ಟ ನಿಲುವು ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.
Laxmi News 24×7