ಲಕ್ನೋ: ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ಕೋರಿ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಶೈಕ್ಷಣಿಕ ಸಂಸ್ಥೆಗಳು ನಿಗದಿಪಡಿಸಿರುವ ಸಮವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಆದ್ಯತೆಗಳಿಗೆ ತಕ್ಕಂತೆ ಬದಲಾಯಿಸುವ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಹೇಳಿದೆ.
ಪ್ರಯಾಗ್ರಾಜ್ನ ಖಾಸಗಿ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿ ತನ್ನ ತಾಯಿಯ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. 10ನೇ ತರಗತಿ ಉತ್ತೀರ್ಣರಾಗಿ ಅದೇ ಶಾಲೆಯಲ್ಲಿ 11ನೇ ತರಗತಿಗೆ ಪ್ರವೇಶ ಪಡೆಯಲು ಇಚ್ಛಿಸಿದ್ದ ಆಕೆ, ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಾಗಿದ್ದು, 6ನೇ ತರಗತಿಯಿಂದಲೂ ತಾನು ಅದನ್ನು ಧರಿಸುತ್ತಿದ್ದೇನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಳು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಇಂದ್ರಜಿತ್ ಶುಕ್ಲಾ ಅವರಿದ್ದ ದ್ವಿಸದಸ್ಯ ಪೀಠವು, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಸ್ಪಷ್ಟಪಡಿಸಿತು. ಈ ವಿಷಯ ಬಂದಾಗಲೆಲ್ಲಾ ಹೈಕೋರ್ಟ್ಗಳು ಹಿಜಾಬ್ ಧರಿಸದಿರುವುದರಿಂದ ಧರ್ಮಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂಬ ಏಕಾಭಿಪ್ರಾಯದ ತೀರ್ಪುಗಳನ್ನು ನೀಡಿವೆ ಎಂದು ಪೀಠ ಉಲ್ಲೇಖಿಸಿದೆ.
ಸಮವಸ್ತ್ರ ನಿಯಮವು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ಅನ್ವಯಿಸುತ್ತದೆ. ವೈಯಕ್ತಿಕ ಆಯ್ಕೆಯ ಆಧಾರದ ಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿನಾಯಿತಿ ನೀಡಿದರೆ ಸಮವಸ್ತ್ರದ ಮೂಲ ಪರಿಕಲ್ಪನೆ ಹಾಗೂ ಶಾಲೆಯ ಶಿಸ್ತೇ ಹಾಳಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಆವರಣದಲ್ಲಿ ಸಮವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಸಂಪೂರ್ಣ ಸ್ವಾಯತ್ತತೆ ಮತ್ತು ಹಕ್ಕಿದೆ. ಸಮವಸ್ತ್ರವು ತಾರತಮ್ಯವಿಲ್ಲದೆ ಸಮಾನತೆ ಮತ್ತು ಶಿಸ್ತಿಗಾಗಿ ಇರುವವರೆಗೂ ಸಂಸ್ಥೆಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಕೋರ್ಟ್ ಹೇಳಿದೆ.
ಶಾಲಾ ಆಡಳಿತ ಮಂಡಳಿ, ರಾಜ್ಯ ಸರ್ಕಾರ ಹಾಗೂ ಸಿಬಿಎಸ್ಇ (CBSE) ಸಹ ವಿದ್ಯಾರ್ಥಿನಿಯ ಅರ್ಜಿಯನ್ನು ವಿರೋಧಿಸಿದ್ದವು. ವಿವಿಧ ಸಮುದಾಯಗಳ ಮಕ್ಕಳು ಕಲಿಯುವ ಶಾಲೆಯಲ್ಲಿ ಒಬ್ಬರಿಗೆ ವಿಶೇಷ ವಿನಾಯಿತಿ ನೀಡಿದರೆ ಶಾಲಾ ಶಿಸ್ತು ಕದಡುತ್ತದೆ ಎಂಬ ಶಾಲೆಯ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.
Laxmi News 24×7