ಹಾಸನ: ಜಿಲ್ಲೆಯ ವಿವಿಧೆಡೆ ಇಂದು ಕೂಡ ಬಾರಿ ಮಳೆಯಾಗಿದೆ. ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧೆಡೆ ವರುಣ ಅಬ್ಬರಿಸಿದ್ದು, ಗುಡುಗು, ಸಿಡಿಲು ಸಹಿತ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದಾರೆ. ಮಳೆಗೆ ವಾಹನ ಸವಾರರು, ಬೀದಿ ಬದಿ ವ್ಯಾಪಾರಿಗಳು ಪರದಾಡುವಂತಾಗಿತ್ತು. ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಕೃಷಿ ಚಟುವಟಿಕೆಗೂ ಮಳೆ ಬಿಡುವು ನೀಡುತ್ತಿಲ್ಲ.
ಮಳೆ ಕೊರತೆಯಿಂದ ಕೆರೆ-ಕಟ್ಟೆಗಳು ಖಾಲಿಯಾಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿತ್ತು. ಅಲ್ಲದೇ ಹಸಿರು ಮೇವಿಲ್ಲದೆ ರೈತರು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ-ಕಟ್ಟೆಗಳು ತುಂಬುತ್ತಿದ್ದು, ಹಸಿರು ಮೇವು ಚಿಗುರುತ್ತಿದ್ದು ರೈತರು ಸಂತಸಗೊಂಡಿದ್ದಾರೆ.
Laxmi News 24×7