ಬೆಳಗಾವಿ: ತಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವ ಗ್ರಾಪಂ ಪಿಡಿಒ ಉತ್ತಮ ಬನಸೋಡೆ ಅವರನ್ನು ಬೇರೆಡೆ ವರ್ಗಾವಣೆ ಮಾಡುವವರೆಗೆ ಗ್ರಾಮ ಪಂಚಾಯತಿಯ ದೈನಂದಿನ ಕೆಲಸಗಳಿಂದ ಹೊರಗುಳಿಯುವ ಮೂಲಕ ಅಸಹಕಾರ ಚಳುವಳಿ ನಡೆಸುವುದಾಗಿ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮ ಪಂಚಾಯತಿಯ ಸಿಬ್ಬಂದಿ ಗುರುವಾರ ತಾ.ಪಂ ಇ.ಒ ಅವರಿಗೆ ಪತ್ರ ನೀಡಿದ್ದಾರೆ.
ತಾ.ಪಂ ಇ.ಒ ಅವರಿಗೆ ನೀಡಿರುವ ಪತ್ರದಲ್ಲಿ ತಮ್ಮ ಸಮಸ್ಯೆ ಉಲ್ಲೇಖಿಸಿರುವ ಗ್ರಾಪಂ ಸಿಬ್ಬಂದಿ, “ಮಂಗೇನಕೊಪ್ಪ ಗ್ರಾಪಂಗೆ ಈಚೆಗೆ ನಿಯುಕ್ತಿಗೊಂಡ ಪಿಡಿಒ ಉತ್ತಮ ಅವರು ಗ್ರಾಮ ಪಂಚಾಯತಿಗೆ ನಿಯಮಿತವಾಗಿ ಆಗಮಿಸುತ್ತಿಲ್ಲ, ತಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ರಾತ್ರಿ ಹತ್ತು, ಹನ್ನೊಂದು ಗಂಟೆೆವರೆಗೆ ಪಂಚಾಯ್ತಿಯಲ್ಲಿ ಇರುತ್ತಾರೆ. ತಮ್ಮ ವೇತನ ಪಾವತಿಸದೇ ತೊಂದರೆ ನೀಡುತ್ತಿದ್ದಾರೆ ಮತ್ತು ಕರ ವಸೂಲಿ ಹಣವನ್ನು ತಮ್ಮ ಕೈಯಲ್ಲಿ ನೇರವಾಗಿ ತಂದು ಕೊಡಲು ಆಗ್ರಹಿಸುತ್ತಾರೆ. ಹೀಗಾಗಿ ತಮಗೆ ಕೆಲಸ ನಿರ್ವಹಿಸಲು ತೊಂದರೆ ಉಂಟಾಗುತ್ತಿದೆ. ಪಿಡಿಒ ಬದಲಾವಣೆ ಮಾಡುವವರೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿದೀಪ ಮತ್ತು ಕುಡಿಯುವ ನೀರು ಸರಬರಾಜು ಹೊರತುಪಡಿಸಿ ಉಳಿದ ಕೆಲಸ ಕಾರ್ಯಗಳಿಗೆ ಅಸಹಕಾರ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.
ಗ್ರಾಪಂ ಸಿಬ್ಬಂದಿ ಶೇಖಪ್ಪ ಪೇಜೊಳ್ಳಿ, ಮುಬಾರಕ ಯರಗಟ್ಟಿ, ಬಾಬು ಚಲವಾದಿ, ವಿಜಯ ಮಾದಾರ, ಅಶೋಕ ಹಿಂಡಲಕರ, ಹರೀಶ ಮಡ್ಡೀಮನಿ, ಸುರೇಶ ತೇಗೂರ, ಶಿವಪ್ಪ ಬೆಡಸೂರ ಅವರಿಂದ ತಾ.ಪಂ ಇ.ಒ ರಮೇಶ ಮೇತ್ರಿ ಮನವಿ ಸ್ವೀಕರಿಸಿದರು.
“ಮಂಗೇನಕೊಪ್ಪ ಗ್ರಾಪಂನಲ್ಲಿ ಐವರು ಸಿಬ್ಬಂದಿ ಕಾರ್ಯನಿರ್ವಹಿಸಲು ಪ್ರಯೋಜನವಿದೆ. ಆದರೆ ಎಂಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ ಮೂವರಿಗೆ ಸಂಬಳ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಸಂಗತಿಯನ್ನು ಸಿಬ್ಬಂದಿಗೆ ತಿಳಿಹೇಳಲು ಹೋದ ತಮ್ಮ ವಿರುದ್ಧ ಗ್ರಾಪಂ ಸಿಬ್ಬಂದಿ ತಿರುಗಿ ಬಿದ್ದಿದ್ದಾರೆ. ತಮ್ಮ ಮೇಲೆ ಕ್ಷುಲ್ಲಕ ಕಾರಣಗಳಿಂದ ಕೂಡಿದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ”ಎಂದು ಪಿಡಿಒ ಹೇಳಿಕೆ ನೀಡಿದ್ದಾರೆ.
Laxmi News 24×7