ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ಸೋಮವಾರಕ್ಕೆ ಮುಂದೂಡಿದೆ.
ಇಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ತಮಿಳುನಾಡು ಪರ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ವಾದ ಮಂಡಿಸಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನಗಳನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. “ದುರದೃಷ್ಟವಶಾತ್, ಕರ್ನಾಟಕ ನಮಗೆ ಪ್ರಮಾಣಾನುಗುಣವಾಗಿ ನೀರು ಹರಿಸುತ್ತಿಲ್ಲ. ಅಲ್ಪ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ತಮಿಳುನಾಡಿಗೆ ಬರಬೇಕಾದ ಪ್ರಮಾಣದ ನೀರು ಬರುತ್ತಿಲ್ಲ ಎಂದು ವಾದಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸ್ಥಾಪನೆ, ಅದರ ಅಧಿಕಾರ, ಕಾರ್ಯಗಳು ಹಾಗೂ ಕರ್ತವ್ಯಗಳನ್ನು ಗಮನಿಸಬೇಕು. ಪ್ರಾಧಿಕಾರ ನೀಡಿರುವ ಆದೇಶಗಳನ್ನು ಕರ್ನಾಟಕ ಪಾಲಿಸಬೇಕಿದೆ. ಆದರೆ, ಕರ್ನಾಟಕ ತನ್ನ ರೈತರಿಗೆ ನೀರು ಹರಿಸುತ್ತಿದ್ದು, ತಮಿಳುನಾಡಿಗೆ ಮಾತ್ರ ನೀರಿನ ಕೊರತೆ ಇದೆ ಎಂದು ಹೇಳುತ್ತಿದೆ ಎಂದು ವೈದ್ಯನಾಥನ್ ನ್ಯಾಯಾಲಯದ ಗಮನಕ್ಕೆ ತಂದರು.
ಈ ನಡುವೆ, ಕರ್ನಾಟಕ ಪರ ವಕೀಲರು ರಾಜ್ಯವು ಈಗಾಗಲೇ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ತಿಳಿಸಿದರು. ನೀರು ಬಿಡುಗಡೆ ಮತ್ತು ಜಲಾಶಯಗಳ ಸ್ಥಿತಿಗತಿ ಸೇರಿದಂತೆ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಈಗ ಸಮಸ್ಯೆ ಏನಿದೆ? ಸಮಸ್ಯೆ ಇದ್ದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗಿ” ಎಂದು ಸೂಚಿಸಿತು.
ಇದೇ ವೇಳೆ, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗಳು ನಡೆಯಲಿರುವುದನ್ನು ಪರಿಗಣಿಸಿದ ಪೀಠ, ಆ ಸಭೆಗಳಲ್ಲಿ ಹೊರಬರುವ ಹೊಸ ಆದೇಶಗಳು ಹಾಗೂ ಶಿಫಾರಸುಗಳನ್ನು ಗಮನಿಸಿದ ಬಳಿಕ ಪ್ರಕರಣದ ವಿಚಾರಣೆ ಮುಂದುವರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.
ತಮಿಳುನಾಡು ಪರ ವಕೀಲರು ಮುಂದಿನ ಸೋಮವಾರವೇ ಅರ್ಜಿಯ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿತು. ಅಲ್ಲದೆ, ಮುಂದಿನ ವಿಚಾರಣೆಯ ವೇಳೆ ಅಗತ್ಯ ಅಂಕಿ-ಅಂಶಗಳು ಹಾಗೂ ನೀರು ಬಿಡುಗಡೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯೊಂದಿಗೆ ಬರುವಂತೆ ಎರಡೂ ರಾಜ್ಯಗಳಿಗೆ ಸೂಚನೆ ನೀಡಿತು.
Laxmi News 24×7