ವಾಷಿಂಗ್ಟನ್: ಅಮೆರಿಕದಲ್ಲಿ ಸಾಂತಾ ಕ್ರೂಜ್‌ನ ಸ್ಟೀಮರ್ ಲೇನ್ ಬಳಿ ಕಾರು ಸಾಗರಕ್ಕೆ ಉರುಳಿ ಭಾರತೀಯ ಮೂಲದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಲಿ ರೆನೀ ಸಿಂಗ್ (19) ಮೃತ ಯುವತಿ. ಈಕೆ ಸಾಂತಾ ಕ್ರೂಜ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದರು.
ಅಪಘಾತದ ಬಗ್ಗೆ ಮಾಹಿತಿ ಪಡೆದ ತುರ್ತು ರಕ್ಷಣಾ ತಂಡವು ಸಿಂಗ್ ಅವರ ಕಾರು ಕರಾವಳಿಯಲ್ಲಿ ಮುಳುಗಿ ಹೋಗಿರುವುದನ್ನು ಪತ್ತೆ ಮಾಡಿತ್ತು. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯನ್ನು ಸಮುದ್ರದಿಂದ ಮೇಲಕ್ಕೆತ್ತಿ ಅಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಯುವತಿ ಕೊನೆಯುಸಿರೆಳೆದಿದ್ದಳು ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಏಪ್ರಿಲ್ 13 ರಂದು ಸಾಂತಾ ಕ್ರೂಜ್‌ನ ಐಕಾನಿಕ್ ಸ್ಟೀಮರ್ ಲೇನ್ ಸರ್ಫ್ ಬ್ರೇಕ್ ಬಳಿ ಈ ಅಪಘಾತ ಸಂಭವಿಸಿದೆ. ಲಾಸ್ ಏಂಜಲೀಸ್ ಟೈಮ್ಸ್ ವರದಿ ಪ್ರಕಾರ, ಅಪಘಾತ ನಡೆದ ಸ್ಥಳದ ಸಮೀಪವಿರುವ ವೆಸ್ಟ್ ಕ್ಲಿಫ್ ಡ್ರೈವ್‌ನ ಭಾಗವು ನಿರಂತರ ಕರಾವಳಿ ಸವೆತದಿಂದಾಗಿ ತೀವ್ರವಾಗಿ ಹಾನಿಗೊಳಗಾಗಿದೆ.
Laxmi News 24×7