ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಹಲವು ಔಷಧಗಳ ಬೆಲೆ ಶೇ.70ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲೆ ನಿಗದಿತ ವ್ಯಾಪಾರ ಮಾರ್ಜಿನ್ಗೆ ಶೇ.30ರ ಮಿತಿ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ಸಾಧ್ಯವಾದರೆ ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ.
ನಿಗದಿತ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಬಾರದ ಕ್ಯಾನ್ಸರ್ ಔಷಧಗಳಿಗೆ ಈ ಮಿತಿಯನ್ನ ಅನ್ವಯಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ದುಬಾರಿ ಕ್ಯಾನ್ಸರ್ ಔಷಧಗಳನ್ನ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವುದು ಹಾಗೂ ರೋಗಿಗಳ ಮೇಲಿನ ಸ್ವಂತ ಖರ್ಚಿನ ಹೊರೆಯನ್ನ ಕಡಿಮೆ ಮಾಡುವುದು ಈ ಕ್ರಮದ ಉದ್ದೇಶವಾಗಿದೆ.
ವ್ಯಾಪಾರ ಮಾರ್ಜಿನ್ಗೆ 30% ಮಿತಿ
ಹೊಸ ಪ್ರಸ್ತಾವನೆಯ ಅನ್ವಯ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಬಾರದ ಕ್ಯಾನ್ಸರ್ ಔಷಧಗಳ ಎಂಆರ್ಪಿ ಮೇಲೆ ವ್ಯಾಪಾರ ಮಾರ್ಜಿನ್ ಅನ್ನು ಶೇ.30ಕ್ಕೆ ಸೀಮಿತಗೊಳಿಸುವ ಸಾಧ್ಯತೆ ಇದೆ. ವಿಶೇಷವಾಗಿ ದುಬಾರಿ ಹಾಗೂ ಪೇಟೆಂಟ್ ಹೊಂದಿರುವ ಔಷಧಗಳ ಬೆಲೆಯಲ್ಲಿ ಇದರಿಂದ ಗಮನಾರ್ಹ ಇಳಿಕೆಯಾಗುವ ನಿರೀಕ್ಷೆಯಿದೆ.
ಬ್ರಾಂಡೆಡ್ ಮತ್ತು ಜೆನೆರಿಕ್ ಔಷಧಗಳು, ದೇಶೀಯ ಹಾಗೂ ಆಮದು ಮಾಡಿಕೊಳ್ಳುವ ಔಷಧಗಳು, ಪೇಟೆಂಟ್ ಹೊಂದಿರುವ ಮತ್ತು ಪೇಟೆಂಟ್ ಇಲ್ಲದ ಕ್ಯಾನ್ಸರ್ ಔಷಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಔಷಧಗಳು ಈ ಕ್ರಮದ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಅಧಿಕೃತ ಮೂಲಗಳ ಪ್ರಕಾರ, ಕೆಲವು ಔಷಧಗಳ MRPಯಲ್ಲಿ ಶೇ.70ರಷ್ಟು ಇಳಿಕೆ ಆಗಬಹುದು. ಇದರಿಂದ ವರ್ಷಕ್ಕೆ ಸುಮಾರು 2,500 ಕೋಟಿ ಉಳಿತಾಯವಾಗಬಹುದು ಎಂದು ಸರ್ಕಾರ ಅಂದಾಜಿಸಿದೆ.
ಇದು ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಸರ್ಕಾರ ಕೈಗೊಂಡ ಕ್ರಮದ ಮುಂದುವರಿದ ಭಾಗವಾಗಿದೆ. 2019ರಲ್ಲಿ ಇದೇ ರೀತಿಯ ಕ್ರಮವನ್ನು ಕೈಗೊಳ್ಳಲಾಗಿತ್ತು. ಇದರಿಂದ 526 ಔಷಧಗಳ ಮೇಲಿನ ಬೆಲೆ ಇಳಿಕೆಯಿಂದಾಗಿ ಸುನಾರು 984 ಕೋಟಿ ರೂ. ಉಳಿತಾಯವಾಗಿತ್ತಯ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದ್ರೆ ಹೊಸ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಂತಿಮ ಕ್ರಮವನ್ನು ಸರ್ಕಾರ ಇನ್ನಷ್ಟೇ ಪ್ರಕಟಿಸಬೇಕಿದೆ.
Laxmi News 24×7