ಬೆಂಗಳೂರು: ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಅಕ್ರಮವಾಗಿ ಸಾವಿರಾರು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ
ವಿಧಾನಸೌಧದಲ್ಲಿ ಈ ಸಂಬಂಧ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಶಾಸಕರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ನಿಯಮಗಳನ್ನು ಮೀರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಸುಮಾರು 2,500 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕುವಂತೆ ಕೇಳಿದ್ದಾರೆ. ಅವರೆಲ್ಲರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮತದಾರರಾಗಿದ್ದು, ಅವರನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರೆಂದು ಸುಳ್ಳು ಬಿಂಬಿಸಿ ಪಟ್ಟಿಯಿಂದ ತೆಗೆದುಹಾಕಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಬರೆದ ಪತ್ರಕ್ಕೆ ಸ್ವತಃ ಮುಖ್ಯ ಚುನಾವಣಾಧಿಕಾರಿಗಳೇ ಉತ್ತರ ನೀಡಿದ್ದು ಈ ರೀತಿಯಾಗಿ ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹಿಂಬರಹ ನೀಡಿದ್ದಾರೆ. ಆದರೂ ಬೆಳಗಾವಿಯ ಕೇವಲ ಒಂದೇ ಒಂದು ಬೂತ್‌ನಲ್ಲೇ 50 ಜನರ ಮತಗಳನ್ನು ಅಳಿಸಿಹಾಕಲು ಪತ್ರ ನೀಡಲಾಗಿದೆ. ಇಷ್ಟೇ ಅಲ್ಲದೆ, ಸುಮಾರು 7,000 ಮತದಾರರ ಹೆಸರನ್ನು ಡಿಲೀಟ್ ಮಾಡಲು ಫಾರ್ಮ್‌ಗಳನ್ನು ಸಲ್ಲಿಸಲಾಗಿದ್ದು, ಅವುಗಳಲ್ಲಿ ಒಂದಕ್ಕೂ ಅರ್ಜಿದಾರರ ಸಹಿಯೇ ಇಲ್ಲ. ಇಷ್ಟೆಲ್ಲಾ ಮಾಡಲು ಶಾಸಕರು ಯಾರು? ಇದು ಕಾನೂನುಬಾಹಿರ ಕೃತ್ಯವಲ್ಲವೇ? ಎಂದು ಅವರು ಪ್ರಶ್ನಿಸಿದರು.
ಚುನಾವಣಾ ಆಯೋಗಕ್ಕೆ ಶಾಸಕರ ವಿರುದ್ಧ ಅಧಿಕೃತ ದೂರು ನೀಡುವುದಾಗಿ ಸ್ಪಷ್ಟಪಡಿಸಿದ ಹರಿಪ್ರಸಾದ್, ಕಾನೂನು ಗಾಳಿಗೆ ತೂರಿ ಅಲ್ಪಸಂಖ್ಯಾತರ ಮತಗಳನ್ನು ಕಿತ್ತುಕೊಳ್ಳಲು ಮುಂದಾಗಿರುವ ಬಿಜೆಪಿಯ ಅಸಲಿ ಮುಖವಾಡ ಈಗ ರಾಜ್ಯದ ಜನತೆಯ ಮುಂದೆ ಕಳಚಿಬಿದ್ದಿದೆ ಎಂದು ಕಿಡಿಕಾರಿದರು.
Laxmi News 24×7