ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ನವೆಂಬರ್ 1ರಂದು ಇಂಡಿ ಒಕ್ಕೂಟ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಬುಧವಾರ ಬೆಂಬಲ ಘೋಷಿಸಿದೆ.
ಚುನಾವಣಾ ಆಯೋಗದ ಮತದಾರರ ಒಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತರುತ್ತಿದೆ ಮತ್ತು ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕ ಸೃಷ್ಟಿಸಿದೆ ಎಂದು ಸಿಜೆಪಿ ಕಿಡಿ ಕಾರಿದೆ.
ʻGyanu Must Goʼ (ಜ್ಞಾನೂ ಕೆಳಗಿಳಿಯಲೇಬೇಕು) ಎಂಬ ಘೋಷಣೆಯೊಂದಿಗೆ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುವ ಮುಖ್ಯ ಚುನಾವಣಾ ಆಯುಕ್ತರು ಅಗತ್ಯವಾದ ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಸ್ವತಂತ್ರ ಕಾರ್ಯನಿರ್ವಹಣೆಯನ್ನ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದೆ.
ಪ್ರಜಾಪ್ರಭುತ್ವದ ಮೂಲ ತತ್ವವೆಂದರೆ ಜನರು ತಮ್ಮ ಸರ್ಕಾರವನ್ನ ಆಯ್ಕೆ ಮಾಡಬೇಕು. ಸರ್ಕಾರವು ತನ್ನ ಮತದಾರರನ್ನ ಆಯ್ಕೆ ಮಾಡುವಂತಿರಬಾರದು. ಆದರೆ, SIR ಪ್ರಕ್ರಿಯೆಯ ಮೂಲಕ ಅರ್ಹ ಮತದಾರರನ್ನ ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳು ದಟ್ಟವಾಗಿದ್ದು, ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿವೆ ಎಂದು ಪಕ್ಷ ಕಳವಳ ವ್ಯಕ್ತಪಡಿಸಿದೆ.
ಭಾರತದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನೂ ಪಕ್ಷ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಜಾತಿ, ಧರ್ಮ, ಲಿಂಗ, ಶಿಕ್ಷಣ ಅಥವಾ ಆರ್ಥಿಕ ಹಿನ್ನೆಲೆ ಯಾವುದಾದರೂ ಇರಲಿ, ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ ಸಮಾನ ಮತದಾನದ ಹಕ್ಕು ನೀಡಲಾಗಿದೆ. ಅಂಬೇಡ್ಕರ್, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಸೇರಿದಂತೆ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ನಾಯಕರು, ಲಕ್ಷಾಂತರ ಭಾರತೀಯರು ಈ ಹಿಂದೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸದಿದ್ದ ಕಾಲದಲ್ಲಿಯೂ ಜನರ ಮೇಲೆಯೇ ನಂಬಿಕೆ ಇಟ್ಟಿದ್ದರು. ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಧ್ವನಿ ಸಿಕ್ಕಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ನಾಗರಿಕರನ್ನ ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ಹೊರಗಿಡುವುದಲ್ಲ, ಬದಲಿಗೆ ಹೆಚ್ಚಿನ ಜನರನ್ನು ಅದರ ಭಾಗವಾಗಿಸುವುದೇ ಪ್ರಜಾಪ್ರಭುತ್ವದ ಆಶಯ ಎಂದು CJP ಅಭಿಪ್ರಾಯಪಟ್ಟಿದೆ.
ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬ ನಾಗರಿಕನ ರಾಜಕೀಯ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿದೆ. ಅರ್ಹ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವುದು ಚುನಾವಣಾ ಆಯೋಗದ ಕರ್ತವ್ಯವೇ ಹೊರತು, ಆ ಹಕ್ಕನ್ನು ಚಲಾಯಿಸಲು ಅಡ್ಡಿಗಳನ್ನು ಸೃಷ್ಟಿಸುವುದಲ್ಲ ಎಂದು ಪಕ್ಷ ಪ್ರತಿಪಾದಿಸಿದೆ.
ಅಲ್ಲದೇ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳಿಗೆ ಬೆಂಬಲ ನೀಡುವುದಾಗಿಯೂ CJP ಘೋಷಿಸಿದೆ. ತನ್ನ ಹೇಳಿಕೆಯ ಕೊನೆಯಲ್ಲಿ ʻಜೈ ಭೀಮ್, ಜೈ ಹಿಂದ್ʼ ಎಂದು ಉಲ್ಲೇಖಿಸಿದೆ.
ನ.1ರ ರ‍್ಯಾಲಿಗೆ ದೆಹಲಿ ಪೊಲೀಸರಿಂದ ಅನುಮತಿ
ಇನ್ನೊಂದೆಡೆ, ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರ‍್ಯಾಲಿ ನಡೆಸಲು ಕಾಂಗ್ರೆಸ್‌ಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಅಗತ್ಯವಾದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Laxmi News 24×7