ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ.
ಆಶ್ವೀಜ ಮಾಸದ ಮೊದಲ ಗುರುವಾರ ಅಂದರೆ ನಾಳೆ (ಅ.29) ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ತೆರೆಯಲಿದೆ. ಗುರುವಾರ ಮತ್ತು ನ.11ರ ಬಾಗಿಲು ಮುಚ್ಚುವ ದಿನದಂದು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಶುಕ್ರವಾರ (ಅ.30) ಬೆಳಗ್ಗೆಯಿಂದ ಸಾರ್ವಜನಿಕರಿಗೆ ದೇವಿ ದರ್ಶನ ಸಿಗಲಿದೆ. ಈಗಾಗಲೇ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ಈ ಬಾರಿ ದಸರಾ ಮಾದರಿಯಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ವಿವಿಧ ಕ್ರೀಡಾ ಸ್ಪರ್ಧೆಗಳು, ಹಳ್ಳಿಕಾರ್, ಅಮೃತ್‌ಮಹಲ್ ತಳಿ, ಶ್ವಾನ, ಬೆಕ್ಕುಗಳ ಪ್ರದರ್ಶನವನ್ನು ಸಹ ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದೆ.
ಗುರುವಾರ ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥ ನಂಜರಾಜೇ ಅರಸ್ ಬಾಳೆಗೊನೆ ಕಡಿದ ನಂತರ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ.
ಈ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್, ಸಂಸದ ಶ್ರೇಯಸ್‌ಪಟೇಲ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನಾಳೆ ಸಾರ್ವಜನಿಕ ದರ್ಶನ ಇರುವುದಿಲ್ಲ. ಗರ್ಭಗುಡಿ ಸ್ವಚ್ಛಗೊಳಿಸಿ ಸುಣ್ಣಬಣ್ಣ ಬಳಿದು ಪೂಜೆ ಸಲ್ಲಿಸಿ ನೈವೇದ್ಯ ಮಾಡಿ ದೇವಿಗೆ ಅಲಂಕಾರ ಮಾಡಿದ ಬಳಿಕ ಶುಕ್ರವಾರ ಬೆಳಿಗ್ಗೆಯಿಂದ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ.

ಈ ಬಾರಿ ಹಾಸನದ ನಗರಸಭೆ ವಸ್ತು ಪ್ರದರ್ಶನದ ಆವರಣದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಕುಸ್ತಿ, ಕಬ್ಬಡಿ, ವಾಲಿಬಾಲ್ ಪಂದ್ಯಾವಳಿ, ಹಳ್ಳಿಕಾರ್ ತಳಿ, ಅಮೃತ್‌ಮಹಲ್ ತಳಿಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಶ್ವಾನ ಪ್ರದರ್ಶನ, ಕೋಲಾಟ ಹಾಗೂ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ನ.1 ರಿಂದ ನ.6 ರೊಳಗೆ ಮುಖ್ಯಮಂತ್ರಿಗಳು ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ. ನ.6 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಿ ದರ್ಶನ ಪಡೆಯಲಿದ್ದಾರೆ. ಬೆ.8 ರಿಂದ ಬೆ.10 ಗಂಟೆಯವರೆಗೆ ಗೋಲ್ಡನ್ ಪಾಸ್ ಇದ್ದವರಿಗೆ ದರ್ಶನ, ಬೆ.10.30 ಮ.12.30 ರವರೆಗೆ ಪ್ರೋಟೋಕಾಲ್‌ನಲ್ಲಿ ಬರುವವರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಬಾರಿ ಹೆಚ್ಚು ಜನ ಅರ್ಚಕರನ್ನು ಬಳಿಸಿಕೊಳ್ಳುತ್ತೇವೆ ಎಂದು ಪ್ರಧಾನ ಅರ್ಚಕರು ಹೇಳಿದ್ದಾರೆ. ಇದರಿಂದಾಗಿ ಜನರಿಗೆ ಹೆಚ್ಚು ಹೊತ್ತು ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. 1,000 ರೂ. ಹಾಗೂ 300 ರೂ. ಟೆಕೆಟ್‌ನ ವಿಶೇಷ ದರ್ಶನದ ಸಾಲುಗಳ ವ್ಯವಸ್ಥೆ ಇರಲಿದೆ. ಹಾಸನಾಂಬ ದೇವಿ ಹಾಸನಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯಕ್ಕೆ ಹಾಸನಾಂಬ ದೇವಿ ವ್ಯಾಪಿಸಿದೆ. ನಾವು ಸಂಕುಚಿತ ಮನೋಭಾವನೆ ಮಾಡಿಕೊಳ್ಳುವುದು ಬೇಡ. ಎಲ್ಲರೂ ಒಟ್ಟಾಗಿ ಜಾತ್ರಾ ಮಹೋತ್ಸವ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ ಹೇಳಿದ್ದಾರೆ.

3 ಪಾಳಿಯಲ್ಲಿ 2,000 ಪೊಲೀಸ್ ಭದ್ರತೆ
ದೇವಿ ದರ್ಶನಕ್ಕೆ ಬರುವ ಭಕ್ತರ ಯಾವುದೇ ಸಾಲುಗಳಲ್ಲಿ ನೂಕು ನುಗ್ಗಲು ಉಂಟಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ಪಾಳಿಯಲ್ಲಿ ಸುಮಾರು 2,000 ಪೊಲೀಸ್ ಹಾಗೂ ಹೋಂಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆ, ಟ್ರಾಫಿಕ್ ಜಾಮ್ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಧರ್ಮ ದರ್ಶನದ ಸಾಲು, 1000 ರೂ., 300 ರೂ. ಸಾಲುಗಳಲ್ಲಿ ಪೊಲೀಸರನ್ನ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದ್ದು ಸರಗಳ್ಳತನ, ಪಿಕ್‌ಪ್ಯಾಕೆಟ್ ಕಳ್ಳರ ಹಾವಳಿ ತಪ್ಪಿಸಲು ಎಲ್ಲೆಡೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪಾರ್ಕಿಂಗ್, ದೇವಾಲಯಕ್ಕೆ ಎಂಟ್ರಿ, ಎಲ್ಲಾ ಸಾಲುಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಸ್ಪರ್ಧೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲೂ ಖಾಕಿ ಕಣ್ಗಾವಲು ಮಾಡಲಾಗಿದೆ. ಇಂದು ಡಿಆರ್ ಗ್ರೌಂಡ್‌ನಲ್ಲಿ ಎಸ್ಪಿ ಶುಭನ್ವಿತಾ ಸಿಬ್ಬಂದಿಗಳಿಗೆ ಮಾಹಿತಿ ಹಾಗೂ ಸೂಚನೆಗಳನ್ನು ನೀಡಿದರು.
ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ಈ ಬಾರಿ 30 ರಿಂದ 35 ಲಕ್ಷ ಭಕ್ತರನ್ನು ಆಗಮಿಸುವ ನಿರೀಕ್ಷೆ ಇದ್ದು ಕುಡಿಯುವ ನೀರು, ಪ್ರಸಾದ ವಿತರಣೆ, ತುರ್ತು ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ಹಾಸನ ನಗರದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
Laxmi News 24×7