ಹಾಸನ: ಸಿದ್ದರಾಮಯ್ಯ ನನ್ನ ರಾಜಕೀಯ ಗುರುಗಳು ಎಂದು ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ಚನ್ನರಾಯಪಟ್ಟಣದ ಕಬ್ಬಾಳು ಗ್ರಾಮದಲ್ಲಿ ಭಕ್ತ ಕನಕದಾಸ ಪ್ರತಿಮೆ ಹಾಗೂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ನಾನು ಜೆಡಿಎಸ್ನಲ್ಲಿದ್ದಾಗ ಅವರು ಅದೇ ಪಕ್ಷದಲ್ಲಿದ್ದರು. ನನ್ನನ್ನು ರಾಜಕೀಯವಾಗಿ ಪೋಷಣೆ ಮಾಡಿ, ಸಹಾಯ ಮಾಡಿ, ಮಂತ್ರಿ ಪದವಿಯವರೆಗೂ ಕರೆದು ತಂದಿರುವ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು.
ಸಿದ್ದರಾಮಯ್ಯ ಚಿಂತನೆಗಳು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಯೊಬ್ಬರು ಒಂದು ಮಗುವಿಗೆ ಅನ್ನರಾಮಯ್ಯ ಎಂದು ಹೆಸರಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಕರ್ನಾಟಕ ರಾಜ್ಯದಲ್ಲಿ ದೇವರಾಜ ಅರಸುರವರು ಹೆಚ್ಚು ಕಾಲ ಮುಖ್ಯಮಂತ್ರಿ ಆಗಿದ್ದರು ಎನ್ನುವ ಹೆಸರಿತ್ತು. ಅದನ್ನು ಮೆಟ್ಟಿ ನಿಂತು ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಹೆಸರನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.
ಈ ರಾಜ್ಯದ ಮುಖ್ಯ ನಾಯಕರ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೇರಿದ್ದಾರೆ. ಮಾತಿಗೆ ತಕ್ಕಂತೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿರುವ ನಾಯಕರು ಯಾರದರೂ ಇದ್ದರೆ ಅದು ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಕೊಂಡಾಡಿದ್ದಾರೆ.
ಸಿದ್ದರಾಮಯ್ಯ ಕರ್ನಾಟಕ ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ದಿದ್ದಾರೆ. ಅವರು ಹದಿನೇಳು ಬಾರಿ ಬಜೆಟ್ ಮಂಡಿಸಿರುವ ಏಕೈಕ ರಾಜಕಾರಣಿ. ಭಾರತ ದೇಶದ ರಾಜಕಾರಣದಲ್ಲಿ ಯಾರು ಅತಿ ಹೆಚ್ಚು ಬಜೆಟ್ ಮಂಡಿಸಿರುವ ಇತಿಹಾಸವಿಲ್ಲ. ಯಾವುದೇ ದೋಷ, ಕಳಂಕ ಇಲ್ಲದೆ ರಾಜಕೀಯ ಮಾಡಿಕೊಂಡು ಬಂದಿರುವವರು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಕರ್ನಾಟಕದ ಇತಿಹಾಸದಲ್ಲಿ ಅವರ ಹೆಸರು ತೆಗೆಯಲು ಸಾಧ್ಯವಿಲ್ಲ.
ಮುಂದೆಯೂ ಕೂಡ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸದೃಢವಾದ ಸರ್ಕಾರ ಆಡಳಿತ ನಡೆಸುತ್ತಿದೆ. ಬೇರೆ ಪಕ್ಷದವರು ಯಾರು, ಏನು ಮಾಡಿಲ್ಲ. ಬರೀ ಭಾಷಣ ಮಾಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
Laxmi News 24×7