ಬೆಳಗಾವಿ: ಕಠಿಣ ತರಬೇತಿ, ಶಿಸ್ತು ಮತ್ತು ಪರಿಶ್ರಮದ ಮೂಲಕ ಬೆಳಗಾವಿ ಅಕ್ಕ-ತಂಗಿ ಒಂದೇ ಭರ್ತಿಯಲ್ಲೇ ಬಿಎಸ್ಎಫ್ಗೆ ಆಯ್ಕೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ದೇಶದ ಗಡಿ ಕಾಯುತ್ತಿದ್ದಾರೆ. ಈ ಮೂಲಕ ಹೆಣ್ಣುಮಕ್ಕಳು ಗಡಿ ಕಾವಲು ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ. ಇದು ಕೇವಲ ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೇ ಇಡೀ ಬೆಳಗಾವಿಗೆ ಹೆಮ್ಮೆಯ ಸಂಗತಿ. ರಜೆಗೆ ಆಗಮಿಸಿದ್ದ ವೇಳೆಈ ಕುರಿತಂತೆ ಸಹೋದರಿಯರು ಮಾತನಾಡಿದ್ದಾರೆ.
ಬೆಳಗಾವಿ ಖಡಕ್ ಗಲ್ಲಿಯ ಸ್ವರಾಂಜಲಿ ಜಾಧವ(25) ಮತ್ತು ಗೀತಾಂಜಲಿ ಜಾಧವ(23) ಬಿಎಸ್ಎಫ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹೋದರಿಯರು. ತಂದೆ ಶಿವಾಜಿ ಜಾಧವ ನಿವೃತ್ತ ಎಎಸ್ಐ ಹಾಗೂ ತಾಯಿ ಶುಭದಾ ಗೃಹಿಣಿಯಾಗಿದ್ದಾರೆ.
ಬಾಲ್ಯದಲ್ಲಿಯೇ ಸಹೋದರಿಯರು ಸೇನೆ ಸೇರುವ ಕನಸು ಕಂಡಿದ್ದರು. ಚಿಕ್ಕವರಿದ್ದಾಗಲೇ ಸೇನೆಯ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದರು. ಇದಕ್ಕೆ ಪ್ರಮುಖ ಕಾರಣ ಅವರ ಅಜ್ಜ ಮಾಜಿ ಸೈನಿಕ ಸದಾಶಿವ ಜಾಧವ. ತಮ್ಮ ಮೊಮ್ಮಕ್ಕಳಿಗೆ ದೇಶ ಭಕ್ತಿ ಬೀಜ ಬಿತ್ತಿದ್ದರು. ಜೊತೆಗೆ ಚಿಕ್ಕಪ್ಪ ಅಶೋಕ ಜಾಧವ, ಸೋದರಮಾವ ಮಾರುತಿ ಕಾಕತಕರ್ ಕೂಡ ಸೈನಿಕರಾಗಿದ್ದರು. ಹಾಗಾಗಿ, ಮನೆಯಲ್ಲಿನ ದೇಶಭಕ್ತಿಯ ವಾತಾವರಣವೇ ಸೇನೆಗೆ ಸೇರುವಂತೆ ಪ್ರೇರೇಪಿಸಿದೆ.
ಸ್ವರಾಂಜಲಿ ಎಂಎ ಎಕನಾಮಿಕ್ಸ್, ಗೀತಾಂಜಲಿ ಬಿಎ ಮುಗಿಸಿದ್ದು, ಪದವಿ ಮುಗಿದ ಮೇಲೆ ಸೇನೆಗೆ ಸೇರುವ ಬಯಕೆ ಹೊಂದಿದ್ದರು. ಅದಕ್ಕಾಗಿ ಇಬ್ಬರೂ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಕಠಿಣ ಅಭ್ಯಾಸ ಮಾಡುತ್ತಿದ್ದರು. ಗಂಟೆಗಟ್ಟಲೇ ಮೈದಾನದಲ್ಲಿ ಬೆವರು ಸುರಿಸುತ್ತಿದ್ದರು. ಜೊತೆಗೆ ಓದಿನಲ್ಲೂ ಮುಂದಿದ್ದರು. ಅದರ ಪರಿಣಾಮ ಮೊದಲ ಯತ್ನದಲ್ಲೇ 2023ರಲ್ಲಿ ಇಬ್ಬರೂ ಬಿಎಸ್ಎಫ್ಗೆ ಆಯ್ಕೆ ಆದರು. ಇಬ್ಬರೂ ಕೂಡ ಅತ್ಯುತ್ತಮ ಕ್ರೀಡಾಪಟುಗಳೂ ಆಗಿದ್ದಾರೆ.
ಪಶ್ಚಿಮ ಬಂಗಾಳದ ಬೈಕುಂಠಪುರದಲ್ಲಿರುವ ಬಿಎಸ್ಎಫ್ ಸಂಸ್ಥೆಯ ಸಬ್ಸಿಡಿಯರಿ ಟ್ರೈನಿಂಗ್ ಸೆಂಟರ್ನಲ್ಲಿ 9 ತಿಂಗಳ ಕಠಿಣ ತರಬೇತಿ ಪೂರ್ಣಗೊಳಿಸಿದ ಬಳಿಕ ಸ್ವರಾಂಜಲಿ ಪಶ್ಚಿಮ ಬಂಗಾಳದ ರಾಣಿನಗರ ಬಿಎಸ್ಎಫ್ ಕ್ಯಾಂಪ್, ಗೀತಾಂಜಲಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೀತಾಂಜಲಿ ಆರ್ಮಿ ಫಿಸಿಕಲ್ ಟ್ರೈನಿಂಗ್ ಕೋರ್ಸ್ನಲ್ಲಿ ಇಡೀ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದರು. ಜೊತೆಗೆ ಕಮಾಂಡೋ ಟ್ರೇನಿಂಗ್ನಲ್ಲಿ ಬಿಐ ಗ್ರೇಡ್ ಸಿಕ್ಕಿದ್ದರಿಂದ ಡೈರೆಕ್ಟರ್ ಜನರಲ್ ಮೆಡಲ್ಗೂ ಪಾತ್ರರಾಗಿದ್ದಾರೆ.
ಅಜ್ಜ ನನಗೆ ಪ್ರೇರಣೆ: ‘ಈಟಿವಿ ಭಾರತ‘ ಜೊತೆಗೆ ಮಾತನಾಡಿದ ಸ್ವರಾಂಜಲಿ, ನಮ್ಮ ಅಜ್ಜನೇ ನನಗೆ ಮೊದಲ ಪ್ರೇರಣೆ. ಜೊತೆಗೆ ತಂದೆ, ಚಿಕ್ಕಪ್ಪ, ಸೋದರಮಾವ ಕೂಡ ಸ್ಫೂರ್ತಿ ನೀಡಿದರು. ನಾವು ಚಿಕ್ಕವರಿದ್ದಾಗಲೇ ಅಜ್ಜ ತೀರಿಕೊಂಡರು. ಆದರೆ, ಅಜ್ಜಿ ನಮಗೆ ಅಜ್ಜನ ದೇಶಭಕ್ತಿಯ ಬಗ್ಗೆ ಹೇಳುತ್ತಿದ್ದರು. ಆದ್ದರಿಂದ ಸೇನೆ ಸೇರಬೇಕು ಎನ್ನುವ ಕನಸು ಬಾಲ್ಯದಲ್ಲೇ ಚಿಗುರೊಡೆಯಿತು. ಆ ಹಾದಿಯಲ್ಲಿ ನಮಗೆ ಹಿಂಜರಿಕೆ ಆಗಲಿಲ್ಲ. ಕಠಿಣ ಅಭ್ಯಾಸ ಮಾಡಿದೆವು. ಮೊದಲ ಪ್ರಯತ್ನದಲ್ಲೇ ನಮ್ಮ ಕನಸು ನನಸಾಯಿತು ಎಂದರು.
ಪುರುಷರಷ್ಟೇ ನಾವೂ ಸ್ಟ್ರಾಂಗ್: ಪುರುಷರಷ್ಟೇ ಮಹಿಳೆಯರು ಸಮರ್ಥರು. ಅವರು ಮಾಡುವ ಎಲ್ಲ ಕೆಲಸಗಳನ್ನು ನಾವೂ ಮಾಡಬಲ್ಲೆವು. ಹಾಗಾಗಿ, ಧೈರ್ಯದಿಂದ ಮುನ್ನುಗ್ಗಿದೆವು. ಆ ನಿಟ್ಟಿನಲ್ಲಿ ನಮ್ಮ ತಂದೆ-ತಾಯಿ ಸೇರಿ ಇಡೀ ಕುಟುಂಬ ಪ್ರೋತ್ಸಾಹಿಸಿತು. ತರಬೇತಿ ವೇಳೆ ದಿನ ಯಾವಾಗ ಶುರುವಾಗುತ್ತೆ, ಮುಗಿಯುತ್ತೆ ಅಂತಾನೇ ಗೊತ್ತಾಗುವುದಿಲ್ಲ. ಇಂತಹ ಕಠಿಣ ತರಬೇತಿಯಲ್ಲಿ ನಾನು ಮೊದಲ ಸ್ಥಾನ ಪಡೆದರೆ, ತಂಗಿ ಗೀತಾಂಜಲಿ ದ್ವಿತೀಯ ಸ್ಥಾನ ಪಡೆದರು. ಬಿಎಸ್ಎಫ್ ಸೆಂಟ್ರಲ್ ಟೀಂ ಅಥ್ಲೆಟಿಕ್ಸ್ಗೆ ಆಯ್ಕೆ ಆದೆ. ಈಗಲೂ ಅದರಲ್ಲೇ ಇದ್ದೇನೆ. ಮುಂದೆ ಅಸಿಸ್ಟಂಟ್ ಕಮಾಂಡೆಂಟ್ ಪರೀಕ್ಷೆ ಎದುರಿಸಿ, ಆ ಹುದ್ದೆ ಗಿಟ್ಟಿಸಿಕೊಳ್ಳುವ ಗುರಿ ಇದೆ ಎಂದು ಸ್ವರಾಂಜಲಿ ತಮ್ಮ ಕನಸನ್ನು ಬಿಚ್ಚಿಟ್ಟರು.
ದೇಶ ಸೇವೆಗೆ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ಅಕಾಡೆಮಿಕ್, ಕ್ರೀಡೆ ಸೇರಿ ಬಹಳಷ್ಟು ಅವಕಾಶಗಳು ಇಲ್ಲಿವೆ. ಒಂದಿಷ್ಟು ಕಷ್ಟಪಟ್ಟರೆ ಯಾರು ಬೇಕಾದರೂ ಸೇನೆಗೆ ಸೇರಬಹುದು. ಒಳ್ಳೆಯ ಬದುಕು ಕಟ್ಟಿಕೊಳ್ಳಬಹುದು ಎಂದು ಸ್ವರಾಂಜಲಿ ಹೇಳಿದರು.
ಮುಂದೆ ಎಸ್ಐ, ಎಸಿ ಆಗುವ ಗುರಿ: ಗೀತಾಂಜಲಿ ಮಾತನಾಡಿ, 2023ರ ಅಕ್ಟೋಬರ್ನಲ್ಲಿ ನಾನು ಮತ್ತು ಅಕ್ಕ ಬಿಎಸ್ಎಫ್ಗೆ ಆಯ್ಕೆಯಾದೆವು. ಒಳ್ಳೆಯ ರೀತಿಯಲ್ಲಿ ತರಬೇತಿ ಮುಗಿಸಿದೆವು. ಬಳಿಕ ಮೇಘಾಲಯದಲ್ಲಿ ಪ್ಯಾರಾ ಮಿಲಿಟರಿ ಕೋರ್ಸ್ನಲ್ಲಿ ಪುರುಷ ಮತ್ತು ಮಹಿಳೆಯರ ಪೈಕಿ ನಾನು ಮೊದಲ ಸ್ಥಾನ ಪಡೆದುಕೊಂಡೆ. ಅದಾದ ಬಳಿಕ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮುಂದೆ ಕಮಾಂಡೋ ಟ್ರೇನಿಂಗ್ನ್ನು ಬಿಐ ಗ್ರೇಡ್ನಲ್ಲಿ ಮುಗಿಸಿದೆ. ಇದರಲ್ಲಿ ಡೈರೆಕ್ಟರ್ ಜನರಲ್ ಮೆಡಲ್ ಕೂಡ ನನಗೆ ಸಿಕ್ಕಿತು. ಮುಂದೆ ಇಲಾಖೆಯ ಪರೀಕ್ಷೆ ಬರೆದು, ಎಸ್ಐ ಇಲ್ಲವೇ ಎಸಿ ಹುದ್ದೆ ಪಡೆಯುವ ಆಶಯವಿದೆ ಎಂದರು.
ದೇಶ ಸೇವೆಗೆ ತ್ಯಾಗ ಮಾಡಬೇಕಾಗುತ್ತೆ: ಸ್ವರಾಂಜಲಿ ಮತ್ತು ಗೀತಾಂಜಲಿ ಅವರ ತಂದೆ ಶಿವಾಜಿ ಜಾಧವ ಮಾತನಾಡಿ, ಆರ್ಮಿಗೆ ಸೇರಬೇಕು ಎನ್ನುವುದು ಅವರ ಗುರಿಯಾಗಿತ್ತು. ಅದಕ್ಕಾಗಿ ಬಹಳಷ್ಟು ಕಷ್ಟಪಟ್ಟು ತಮ್ಮ ಗುರಿ ಮುಟ್ಟಿದರು. ದೇಶ ಸೇವೆ ಮುಂದೆ ಯಾವುದೂ ದೊಡ್ಡದಲ್ಲ. ಇದಕ್ಕಾಗಿ ನಾವು ತ್ಯಾಗ ಮಾಡಬೇಕಾಗುತ್ತದೆ. ಪುತ್ರ ಶಿವತೇಜ್ ಪಿಯುಸಿ ವಿಜ್ಞಾನ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ಎನ್ಡಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾನೆ. ಇಂತಹ ಮಕ್ಕಳನ್ನು ಪಡೆದಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನಮ್ಮ ತಂದೆಯವರು ಕೂಡ ಸೈನಿಕರಾಗಿದ್ದರು. ಜೊತೆಗೆ ಅತ್ಯುತ್ತಮ ಹಾಕಿ ಆಟಗಾರ. 1962ರಲ್ಲಿ ನಮ್ಮ ಎಂಎಲ್ಐಆರ್ಸಿ ಹಾಕಿ ತಂಡವು ಪಾಕಿಸ್ತಾನದ ರಾಷ್ಟ್ರೀಯ ತಂಡವನ್ನು ಸೋಲಿಸಿತ್ತು. ನಮ್ಮ ತಂದೆಯವರೂ ವಿಜೇತ ತಂಡದ ಸದಸ್ಯರಾಗಿದ್ದರು ಎಂದು ಹರ್ಷ ವ್ಯಕ್ತಪಡಿಸಿದರು.
Laxmi News 24×7