Breaking News

ಪೊಲೀಸ್ ಅಧಿಕಾರಿಗೆ ನಿಂದನೆ – ಪ್ರತಾಪ್ ಸಿಂಹ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

Spread the love

ಮೈಸೂರು: ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣ ಹಾಗೂ ಪೊಲೀಸ್ ಅಧಿಕಾರಿಯೊಬ್ಬರಿಗೆ ಜಾತಿ ನಿಂದನೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿ ಎಫ್‌ಐಆರ್  ದಾಖಲಾಗಿದೆ.

ಟಿ. ನರಸೀಪುರ ತಾಲೂಕಿನ ಕೈಯಂಬಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಮಧು ಕೆ.ಟಿ. ಅವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಟಿ. ನರಸೀಪುರ ಪೊಲೀಸ್ ಠಾಣಾ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಣೇಶ ವಿಸರ್ಜನಾ ಶೋಭಾ ಯಾತ್ರೆಯ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಮೈಕ್ ಎದುರು ಈ ವಿವಾದಾತ್ಮಕ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು ಸ್ವೀಕರಿಸಿದ ಪೊಲೀಸರುಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 352(ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 356(ಕ್ರಿಮಿನಲ್ ಮಾನನಷ್ಟ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿ ಈಗ ಎರಡನೇ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?
ಪ್ರತಾಪ್ ಸಿಂಹ ಅವರು ತಮ್ಮ ಭಾಷಣದಲ್ಲಿ, “ನೀವು ಕೇವಲ ನೀಲಿ ಶಾಲು ಹೊದ್ದು ಉದರ ನಿಮಿತ್ತವಾಗಿ ಬಂದು ನಿಲ್ಲುತ್ತೀರಿ, ನಿಮಗೆ ಅಂಬೇಡ್ಕರ್ ಅವರ ಬಗ್ಗೆ ಏನೂ ಗೊತ್ತಿಲ್ಲ, ಮೊದಲು ಅಂಬೇಡ್ಕರ್ ಓದಿ” ಎಂದು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಅಲ್ಲದೆ, ಶೋಷಿತರ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಯ ಪದಾಧಿಕಾರಿಗಳನ್ನು ‘ಹಣಕ್ಕಾಗಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡುವವರು’ ಎಂದು ಸುಳ್ಳು ಆರೋಪ ಹೊರಿಸಿ ಜಾತಿನಿಂದನೆ ಮಾಡಿದ್ದಾರೆ ಎಂದು ದೂರಲಾಗಿದೆ.

ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರ ಜಾತಿಯನ್ನು ಪ್ರಸ್ತಾಪಿಸಿ, ಪರಿಶಿಷ್ಟ ಜಾತಿಗೆ ಸೇರಿದ ಧನಂಜಯ ಎಂಬ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. “ನಿಮ್ಮ ಜಾತಿಯ ಅಧಿಕಾರಿ ಎಂಬ ಒಂದೇ ಕಾರಣಕ್ಕೆ ಅವರನ್ನು ಬೆಂಬಲಿಸುತ್ತೀರಿ”, “ಆತ ಒಬ್ಬ ಕ್ಷುಲ್ಲಕ, ಕಳಪೆ ವ್ಯಕ್ತಿತ್ವದ ಇನ್ಸ್‌ಪೆಕ್ಟರ್” ಎಂದು ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿ ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪಟ್ಟಣದ ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕೆಡಿಸುವ ದುರುದ್ದೇಶದಿಂದ ಮುಖ್ಯ ಆರೋಪಿ ಹಾಗೂ ಶೋಭಾ ಯಾತ್ರೆಯ ಆಯೋಜಕರು ಒಟ್ಟಾಗಿ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ

Spread the loveಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿನಡೆದಿದೆ. ಜಯಶೀಲಾ.ಬಿ.ಕೆ (ಪ್ರಿಯಾಂಕ 24) ಅನುಮಾನಾಸ್ಪದವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ