Breaking News

ನಂದಿನಿ ಹಾಲಿನ ದರ 8 ರೂ. ಹೆಚ್ಚಳ ಮಾಡಿ – ಡಿಕೆಶಿಗೆ ಒಕ್ಕೂಟಗಳ ಮನವಿ

Spread the love

ಬೆಂಗಳೂರು: ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್ ಗೆ ರೂ.8ರಿಂದ ರೂ.10ರಷ್ಟು ಹೆಚ್ಚಿಸಲು ಕರ್ನಾಟಕ ರಾಜ್ಯದ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳ ನಿಯೋಗ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  ಅವರಿಗೆ ಮನವಿ ಸಲ್ಲಿಸಿದೆ.

ವಿಧಾನಸೌಧದಲ್ಲಿ ಶಿವಕುಮಾರ್ ಅವರನ್ನು ಹಾಲು ಒಕ್ಕೂಟಗಳ ನಿಯೋಗವು ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, “ಕಳೆದ 10 ವರ್ಷಗಳಲ್ಲಿ ಪಶು ಆಹಾರ ದರದಲ್ಲಿನ ಹೆಚ್ಚಳ, ಪ್ರತಿ ಲೀಟರ್ ಹಾಲು ಉತ್ಪಾದನೆಗೆ ತಗಲುವ ವೆಚ್ಚ, ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ಹಾಲು, ಒಕ್ಕೂಟ ಹೊರತುಪಡಿಸಿ ಬೇರೆ ಕಡೆ ಮಾರಾಟವಾಗುತ್ತಿದೆ? ಒಕ್ಕೂಟ ಎಷ್ಟು ಖರೀದಿಸುತ್ತಿದೆ? ನೆರೆಯ ರಾಜ್ಯಗಳಲ್ಲಿ ಹಾಲು ಖರೀದಿ ಮತ್ತು ಮಾರಾಟ ದರದ ವಿವರ ಸೇರಿದಂತೆ ಸಮಗ್ರ ಮಾಹಿತಿಯನ್ನು ಸಲ್ಲಿಸಿ” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಯೋಗದ ಪರವಾಗಿ ಮಾತನಾಡಿದ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್, “ಹೈನುಗಾರಿಕೆಗೆ ಅಗತ್ಯವಿರುವ ಪಶು ಆಹಾರ, ಮೇವು, ಔಷಧೋಪಚಾರ ಸೇರಿದಂತೆ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಹಾಲಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಸದ್ಯದ ಬರ ಪರಿಸ್ಥಿತಿಯಲ್ಲಿ ಬೆಳೆ ಕೊರತೆಯಿಂದ ವ್ಯವಸಾಯ ಆದಾಯ ತೀವ್ರವಾಗಿ ಕುಸಿದಿದ್ದು, ಮೇವಿನ ಲಭ್ಯತೆ ಕಡಿಮೆಯಾಗಿರುವುದರಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ” ಎಂದು ವಿವರಿಸಿದರು.

“ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳು ಹಾಗೂ ಖಾಸಗಿ ಡೈರಿಗಳು ನಿರಂತರವಾಗಿ ಹಾಲು ಮತ್ತು ಹಾಲಿನ ಉತ್ಪನ್ನ ದರಗಳನ್ನು ಏರಿಕೆ ಮಾಡುತ್ತಿವೆ. ಗ್ರಾಹಕರ ಹಿತದೃಷ್ಠಿಯಿಂದ ಕಳೆದ ಒಂದೂವರೆ ವರ್ಷಗಳಿಂದ ಹಾಲಿನ ದರವನ್ನು ನಾವು ಹೆಚ್ಚಳ ಮಾಡಿರುವುದಿಲ್ಲ. ಖಾಸಗಿ ಸಂಸ್ಥೆಗಳು ಹೆಚ್ಚಿನ ಹಾಲಿನ ಶೇಖರಣೆಗೆ ಪ್ರಯತ್ನಿಸುತ್ತಿದ್ದು, ಒಕ್ಕೂಟಗಳು ಹಾಲು ಶೇಖರಣೆಗೆ ತೀವ್ರ ಪೈಪೋಟಿ ಎದುರಿಸಬೇಕಾಗಿದೆ” ಎಂದು ಹೇಳಿದರು.

“ಕರ್ನಾಟಕದಲ್ಲಿ ಒಕ್ಕೂಟ ಉತ್ಪಾದಕರಿಂದ ಟೋನ್ಡ್ ಹಾಲನ್ನು ಲೀಟರಿಗೆ 35 ರೂ.ಗೆ ಖರೀದಿಸುತ್ತಿದ್ದು, ನೆರೆಯ ಆಂಧ್ರಪ್ರದೇಶದಲ್ಲಿ 41.5 ರೂ., ಕೇರಳದಲ್ಲಿ 41.8 ರೂ, ಮಹಾರಾಷ್ಟ್ರದಲ್ಲಿ 41 ರೂ. ತಮಿಳುನಾಡಿನಲ್ಲಿ 42.24 ರೂ.ಗೆ ಖರೀದಿಸಲಾಗುತ್ತಿದೆ” ಎಂದು ಹೇಳಿದರು.

“ಇದೇ ರೀತಿ ಹಾಲಿನ ಗರಿಷ್ಠ ಮಾರಾಟ ದರದಲ್ಲಿ ಸಹ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಲೀಟರಿಗೆ ಕನಿಷ್ಠ 12 ರೂ. ಕಡಿಮೆಯಿದೆ” ಎಂದರು.


Spread the love

About Laxminews 24x7

Check Also

ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ

Spread the loveಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿನಡೆದಿದೆ. ಜಯಶೀಲಾ.ಬಿ.ಕೆ (ಪ್ರಿಯಾಂಕ 24) ಅನುಮಾನಾಸ್ಪದವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ