Breaking News

ಧಾರ್ಮಿಕ ಆಚರಣೆಗೆ ಜಾತಿ ಬಣ್ಣ – ರಾಹುಲ್‌ ವಿರುದ್ಧ SC/ST ಕಾಯ್ದೆ ಅಡಿ ಕೇಸ್‌ ದಾಖಲು

Spread the love

ಡೆಹ್ರಾಡೂನ್‌: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮ ನಡೆದ ಸ್ಥಳದಲ್ಲಿ ನಡೆದ ಧಾರ್ಮಿಕ ಆಚರಣೆಗೆ ಜಾತಿ ಬಣ್ಣ ಬಳಿದಿದ್ದಾರೆ ಎಂಬ ಆರೋಪದಡಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಾಲ್ಮೀಕಿ ಸಮುದಾಯದ ಮುಖಂಡ ಹಾಗೂ ಶ್ರೀರಾಮ್ ಸೇನಾ ಧರ್ಮಾರ್ಥ ಸೇವಾ ನ್ಯಾಸ್‌ನ ಸದಸ್ಯ ಅಮಿತ್ ಕುಮಾರ್ ನೀಡಿದ ದೂರಿನ ಮೇರೆಗೆ ಹಲ್ದ್ವಾನಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ ಆಗಸ್ಟ್ 11ರಂದು ಕೆಲವರು ಅದೇ ಮೈದಾನದಲ್ಲಿ ‘ಶುದ್ಧೀಕರಣ ಯಜ್ಞ’ ಹಾಗೂ ಸ್ವಚ್ಛತಾ ಕಾರ್ಯ ನಡೆದಿತ್ತು.

ಈ ಕುರಿತು ಆಗಸ್ಟ್ 29ರಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, “ಇದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿ ಹಾಗೂ ಅಸ್ಪೃಶ್ಯತೆಯ ಆಚರಣೆ” ಎಂದು ಟೀಕಿಸಿ, ಆಯೋಜಕರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಮಿತ್ ಕುಮಾರ್ ದೂರಿದ್ದಾರೆ. “ಸ್ಥಳದಲ್ಲಿ ನಡೆದ ಧಾರ್ಮಿಕ ವಿಧಿವಿಧಾನ ಹಾಗೂ ಸ್ವಚ್ಛತಾ ಅಭಿಯಾನದಲ್ಲಿ ದಲಿತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರು ಭಾಗಿಯಾಗಿದ್ದರು. ಮೈದಾನದಲ್ಲಿ ಕಸ ಬಿದ್ದಿದ್ದರಿಂದ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಅನುಚಿತವಾದ ಘೋಷಣೆಗಳನ್ನು ಕೂಗಿದ್ದರಿಂದ ಸ್ವಚ್ಛತೆ ಮಾಡಲಾಯಿತೇ ಹೊರತು, ಇದಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರ ಜಾತಿಗೂ ಯಾವುದೇ ಸಂಬಂಧವಿಲ್ಲ. ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡಿ ಆಚರಣೆಯಲ್ಲಿ ಭಾಗಿಯಾದವರನ್ನು ಅಸ್ಪೃಶ್ಯತೆ ಪಾಲಕರು ಎಂದು ಬಿಂಬಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡ ಕಾಂಗ್ರೆಸ್ ಉಸ್ತುವಾರಿ ಕುಮಾರಿ ಸೆಲ್ಜಾ, “ಶುದ್ಧೀಕರಣ ನಡೆಸಿದವರ ವಿರುದ್ಧ ಯಾವುದೇ ಕ್ರಮವಿಲ್ಲ, ಆದರೆ ದಲಿತರ ಪರ ಧ್ವನಿ ಎತ್ತಿದ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ಹಾಕಲಾಗಿದೆ. ಇದು ಬಿಜೆಪಿ-ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಮತ್ತು ದಲಿತ ವಿರೋಧಿ ನೀತಿಯನ್ನು ತೋರಿಸುತ್ತದೆ. ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ಅಥವಾ ಗಾಂಧಿ ಕುಟುಂಬ ಹೆದರುವುದಿಲ್ಲ; ಈ ಪ್ರಕರಣವನ್ನು ಕಾನೂನು ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಎದುರಿಸುತ್ತೇವೆ” ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಸುಪಾರಿ ಕೊಟ್ಟು ಪತಿಯ ಹತ್ಯೆ – ಪತ್ನಿ, ಪ್ರಿಯಕರ ಸೇರಿ ಮೂವರು ಅರೆಸ್ಟ್‌

Spread the loveದಾವಣಗೆರೆ: ಮಹಿಳೆಯೊಬ್ಬಳು ಪ್ರಿಯಕರನ  ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿಸಿದ ಘಟನೆ ಜಗಳೂರಿನ ದೊಣೆಹಳ್ಳಿ ಹೊಸೂರು ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ