ಬೆಳಗಾವಿ: ಅಪರಾಧ ಪತ್ತೆ ಹಾಗೂ ತನಿಖಾ ಕೌಶಲ್ಯ ಪ್ರದರ್ಶಿಸುವ ಸಲುವಾಗಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೈದಾನದಲ್ಲಿ ಪೊಲೀಸ್ ಶ್ವಾನಗಳ ರೋಚಕ ಸ್ಪರ್ಧೆ ಮತ್ತು ಆಕರ್ಷಕ ಕವಾಯತು ನಡೆಯಿತು.
ಉತ್ತರ ವಲಯ ವ್ಯಾಪ್ತಿಯ 6 ಜಿಲ್ಲೆಗಳ ಶ್ವಾನಪಡೆಗಳು ಭಾಗವಹಿಸಿದ್ದ ಈ ತರಬೇತಿ ಸಾಮರ್ಥ್ಯ ಪರೀಕ್ಷೆಯಲ್ಲಿ, ಶ್ವಾನಗಳ ಚುರುಕುತನ ಹಾಗೂ ಕರ್ತವ್ಯನಿಷ್ಠೆ ನೆರೆದಿದ್ದವರ ಗಮನ ಸೆಳೆಯಿತು.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಮುಧೋಳ ಹೌಂಡ್ ಸೇರಿದಂತೆ ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಮತ್ತು ಬೆಲ್ಜಿಯಂ ಮ್ಯಾಲಿನಾಯ್ಸ್‌ನಂತಹ 18ಕ್ಕೂ ಹೆಚ್ಚು ಶ್ವಾನಗಳು ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದವು.
ಶ್ವಾನಗಳ ತರಬೇತಿಯ ಗುಣಮಟ್ಟ ಮತ್ತು ಕ್ರಿಯಾಶೀಲತೆಯನ್ನು ಅಳೆಯಲು ಹಿರಿಯ ಪೊಲೀಸ್ ಅಧಿಕಾರಿಗಳು 6 ಪ್ರಮುಖ ವಿಭಾಗಗಳಲ್ಲಿ ಕಠಿಣ ಪರೀಕ್ಷೆ ನಡೆಸಿದರು. ಆಜ್ಞಾಪಾಲನೆ, ವಾಸನೆ ಗ್ರಹಿಕೆ, ಶರೀರ ಶೋಧ, ಮಾದಕ ವಸ್ತು ಪತ್ತೆ, ಜಾಡು ಹಿಡಿಯುವುದು, ಮೈದಾನ ಶೋಧನೆ ವಿಭಾಗದಲ್ಲಿ ಪರೀಕ್ಷೆ ನಡೆಯಿತು.
ಅಪರಾಧ ನಿಯಂತ್ರಣ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ಪೊಲೀಸ್ ಶ್ವಾನಗಳ ಕಾರ್ಯಕ್ಷಮತೆ ಎಷ್ಟು ಮಹತ್ವದ್ದು ಎಂಬುದನ್ನು ಈ ಸ್ಪರ್ಧೆಯು ಸಾಬೀತುಪಡಿಸಿತು. ತೀರ್ಪುಗಾರರ ಮೌಲ್ಯಮಾಪನದ ನಂತರ, ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶ್ವಾನಗಳು ಮತ್ತು ಅವುಗಳ ತರಬೇತುದಾರರಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.
Laxmi News 24×7